ವಾಶಿಂಗ್ಟನ್ : ಕೊರೊನಾ ವೈರಸ್ನಿಂದ ಏನೇ ಆದರೂ ಅಮೆರಿಕದಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಲ್ಲ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕೋವಿಡ್-19ನಿಂದಾಗಿ ಅಮೆರಿಕದಲ್ಲಿ ಹತ್ತಾರು ಸಾವಿರ ಜನ ಸಾಯಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದರೂ ಲಾಕ್ಡೌನ್ ಸಾಧ್ಯವಿಲ್ಲ ಎಂದಿದ್ದಾರೆ ಟ್ರಂಪ್.
ಈ ಕುರಿತು ಬುಧವಾರ ಸ್ಪಷ್ಟನೆ ನೀಡಿದ ಟ್ರಂಪ್, ಜನ ಮನೆಯಲ್ಲೇ ಇರಬೇಕು ಎಂಬ ನೀತಿ ಜಾರಿಗೊಳಿಸುವ ವಿವೇಚನೆಯನ್ನು ಆಯಾ ರಾಜ್ಯಗಳ ಗವರ್ನರ್ಗಳಿಗೇ ಬಿಡಲಾಗಿದೆ. ಆದರೂ ಕೋವಿಡ್-19 ಸೋಂಕು ಹೆಚ್ಚಾಗಿರುವ ದೇಶದ ಹಾಟ್ಸ್ಪಾಟ್ ಪ್ರದೇಶಗಳಲ್ಲಿ ವಿಮಾನ ಹಾಗೂ ರೈಲು ಸಂಚಾರಗಳನ್ನು ನಿಯಂತ್ರಿಸುವ ಕುರಿತಾಗಿ ಯೋಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಜಾರಿಯಲ್ಲಿರುವ ಸಾಮಾಜಿಕ ಅಂತರದ ನೀತಿಗಳನ್ನು ಮುಂದುವರೆಸಿದರೂ ಕೂಡ 1,00,000 ದಿಂದ 2,40,000 ಅಮೆರಿಕನ್ನರು ಕೋವಿಡ್ಗೆ ಬಲಿಯಾಗುವ ಸಾಧ್ಯತೆಗಳಿವೆ ಎಂದು ವೈಟ್ ಹೌಸ್ ವರದಿ ಹೇಳಿದರೂ, ಟ್ರಂಪ್ ಸಂಪೂರ್ಣ ಲಾಕ್ಡೌನ್ ಜಾರಿಗೆ ಒಲವು ತೋರಿಸಿಲ್ಲ.
'ನಮಗೆ ನಮ್ಮ ಗವರ್ನರ್ಗಳು ಹಾಗೂ ಮೇಯರ್ಗಳ ಬಗ್ಗೆ ವಿಶ್ವಾಸವಿದೆ. ಜನರಿಗೆ ಯಾವುದು ಒಳ್ಳೆಯದೋ.. ಆ ನಿರ್ಧಾರವನ್ನು ಅವರು ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ' ಎಂದು ಅಮೆರಿಕದ ಸರ್ಜನ್ ಜನರಲ್ ಜೆರೋಮ್ ಆ್ಯಡಮ್ಸ್ ತಿಳಿಸಿದ್ದಾರೆ.