ವಾಷಿಂಗ್ಟನ್: ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ದುಃಸ್ಥಿತಿಯ ಬಗ್ಗೆ 'ಧಾರ್ಮಿಕ ಸ್ವಾತಂತ್ರ್ಯದ' ಪರ ಧ್ವನಿ ಎತ್ತಿದ್ದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇಂಡೋ-ಅಮೆರಿಕನ್ ಕ್ರಿಶ್ಚಿಯನ್ ಸಂಘಟನೆ ಧನ್ಯವಾದ ಸಲ್ಲಿಸಿದೆ.
ಆರ್ಥಿಕ ಪ್ರಗತಿಗೆ ರಾಜಕೀಯ ನೆಮ್ಮದಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿನ ಮಾತುಕತೆಯ ಸಂದರ್ಭದಲ್ಲಿ ದೇಶದ ಹಿತದೃಷ್ಟಿಯಿಂದ ಟ್ರಂಪ್ ವ್ಯಕ್ತಪಡಿಸಿದ ಕಾಳಜಿಗೆ ಭಾರತ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಇದೊಂದು ನೈಜವಾದ ಆಶಾಭಾವ ಎಂದು ಫೆಡರೇಷನ್ ಆಫ್ ಇಂಡಿಯನ್ ಅಮೆರಿಕನ್ ಕ್ರಿಶ್ಚಿಯನ್ ಆರ್ಗನೈಸೇಷನ್ಸ್ ಆಫ್ ನಾರ್ತ್ ಅಮೆರಿಕ (ಫಿಯಾಕೋನಾ) ಹೇಳಿದೆ.
ಮುಸ್ಲಿಮರನ್ನು ತಾರತಮ್ಯಕ್ಕೆ ಒಳಪಡಿಸಲಾಗುತ್ತಿದೆ. ಭಾರತದಲ್ಲಿ ದ್ವೇಷದಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪದ ಬಗ್ಗೆ ಟ್ರಂಪ್ ಅವರನ್ನು ಮಂಗಳವಾರ ಕೇಳಿದಾಗ, 'ನಾವು ಅದರ ಬಗ್ಗೆ ನಿರ್ದಿಷ್ಟವಾಗಿ ಮುಸ್ಲಿಮರೊಂದಿಗೆ ಚರ್ಚಿಸಿದ್ದೇವೆ. ಜೊತೆಗೆ ಕ್ರಿಶ್ಚಿಯನ್ ಅವರೊಂದಿಗೂ ಮಾತುಕತೆ ನಡೆಸಿದ್ದೇವೆ' ಎಂದು ಉತ್ತರಿಸಿದ್ದರು.
ನಾನು ಪ್ರಧಾನಮಂತ್ರಿಯಿಂದ ಬಹಳ ಶಕ್ತಿಯುತವಾದ ಉತ್ತರ ಪಡೆದಿದ್ದೇನೆ. ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ದೀರ್ಘಕಾಲದವರೆಗೆ ಬಹಳಷ್ಟು ಜನರ ಮುಂದೆ ಮಾತನಾಡಿದ್ದೇವೆ. ನನಗೆ ಬಹಳ ಸಮರ್ಪಕವಾದ ಉತ್ತರ ಸಿಕ್ಕಿದೆ ಎಂದು ಅವರು ಹೇಳಿದರು.
ಟ್ರಂಪ್ ಅವರ ಪ್ರತಿಕ್ರಿಯಿಗೆ ಫಿಯಾಕೋನಾ ಅಧ್ಯಕ್ಷ ಕೋಶಿ ಜಾರ್ಜ್ ಮಾತನಾಡಿ, ಅವರ ಚರ್ಚೆಗಳಲ್ಲಿ ನಮಗೆ ಯಾವುದೇ ವಿಧದ ವಸ್ತುನಿಷ್ಠತೆಯ ಕೊರತೆ ಕಂಡುಬಂದಿಲ್ಲ. ಪ್ರಧಾನಿ ಮೋದಿ ಅವರೊಂದಿಗಿನ ಮಹತ್ವದ ದ್ವಿಪಕ್ಷೀಯ ಚರ್ಚೆಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವಿಷಯವನ್ನು ಆದ್ಯತೆಯ ವಸ್ತುವಾಗಿ ಸೇರಿಸಲು ಅಧ್ಯಕ್ಷರು ಅವಕಾಶ ಕೊಟ್ಟಿರುವುನ್ನು ನಾವು ಪ್ರೋತ್ಸಾಹಿಸುತ್ತೇವೆ ಎಂದರು.
ಭಾರತವನ್ನು ಸಕಾರಾತ್ಮಕ ದೃಷ್ಟಿಯಲ್ಲಿ ಜಗತ್ತಿನ ಮುಂದಿಡುವ ಬಿಜೆಪಿಯ ಪ್ರಯತ್ನದ ಹೊರತಾಗಿಯೂ ಪ್ರಸ್ತುತ, ನೀತಿಗಳ ಪರಿಣಾಮದಿಂದ ನಡೆಯುತ್ತಿರುವ ಹಿಂಸಾಚಾರವನ್ನು ಜಗತ್ತು ಗಮನಿಸುತ್ತಿದೆ ಎಂದು ಫಿಯಾಕೋನಾದ ಮುಖ್ಯಸ್ಥ ಜಾನ್ ಪ್ರಭುದೋಸ್ ಹೇಳಿದರು.
ರಾಜಕೀಯ ನೆಮ್ಮದಿ ಆರ್ಥಿಕ ಪ್ರಗತಿಗೆ ಮೂಲಭೂತವಾಗಿದೆ. ದೇಶವನ್ನು ಬಹುಸಂಖ್ಯಾತ ಮತ್ತು ಅಸಹಿಷ್ಣುತೆಯತ್ತ ಕೊಂಡೊಯ್ಯುವ ನೀತಿಗಳನ್ನು ಉತ್ತೇಜಿಸುವ ಮೂಲಕ ಮೋದಿ ಸರ್ಕಾರ, ಸಾಮಾನ್ಯ ನಾಗರಿಕರ ಏಳಿಗೆಗೆ ಅಪಾಯವನ್ನು ಉಂಟುಮಾಡುತ್ತಿದೆ ಎಂದು ಇದೇ ವೇಳೆ, ಆರೋಪಿಸಿದರು.