ವಾಷಿಂಗ್ಟನ್: ಜಾಗತಿಕವಾಗಿ 4.56 ಲಕ್ಷಕ್ಕೂ ಹೆಚ್ಚು ಜನರು ಮತ್ತು ಅಮೆರಿಕದಲ್ಲಿ 1.22 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಮಾರಕ ಕೊರೊನಾ ವೈರಸ್ ಹರಡುವಿಕೆಗೆ ಚೀನಾ ಕಾರಣವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿರುವುದಾಗಿ ಅವರ ವಕ್ತಾರರು ತಿಳಿಸಿದ್ದಾರೆ.
ಅಧ್ಯಕ್ಷರು ಚೀನಾವನ್ನು ದೂಷಿಸಲು ಎಂದಿಗೂ ವಿಷಾದ ವ್ಯಕ್ತಪಡಿಸುವುದಿಲ್ಲ. ವೈರಸ್ ಹರಡಲು ಚೀನಾ ಕಾರಣವಾಗಿದೆ. ನಮ್ಮ ಸೈನಿಕರಿಗೆ ತಪ್ಪು ಮಾಹಿತಿ ನೀಡಿ ಚೀನಾ ಮೋಸ ಮಾಡಿದೆ. ಹಾಗಾಗಿ ನಾವು ಯುಎಸ್ ಸೈನಿಕರ ಪರವಾಗಿ ನಿಲ್ಲುತ್ತೇವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಹೇಳಿದ್ದಾರೆ.
ಕಳೆದ ವಾರ ಟ್ರಂಪ್ ನಡೆಸಿದ ತುಲ್ಸಾ ರ‍್ಯಾಲಿಯಲ್ಲಿ ಕುಂಗ್ ಫ್ಲೂ ಎಂಬ ಪದ ಬಳಸಿದ್ದರ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಯ್ಲೀ ಮೆಕ್, ಅಧ್ಯಕ್ಷರು ಆ ಪದವನ್ನು ಜನಾಂಗೀಯ ದ್ವೇಷವಾಗಿ ಬಳಸಿಲ್ಲ. ವೈರಸ್ನ ಮೂಲ ಚೀನಾ ಆಗಿರುವುದರಿಂದ ಹಾಗೆ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಪ್ರಪಂಚದಾದ್ಯಂತ ಏಷ್ಯನ್-ಅಮೆರಿಕನ್ ಸಮುದಾಯವನ್ನು ರಕ್ಷಿಸಲು ಯುಎಸ್ ಬದ್ಧವಾಗಿದೆ. ಅವರು ಅದ್ಭುತ ಜನರು, ವೈರಸ್ ಹರಡಿದ್ದು ಅವರ ಕಾರಣದಿಂದ ಅಲ್ಲ. ವೈರಸ್ ವಿರುದ್ಧ ಹೋರಾಡಲು ಅವರು ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ನಾವು ಒಟ್ಟಾಗಿ ಮೇಲುಗೈ ಸಾಧಿಸುತ್ತೇವೆ. ಇದು ಬಹಳ ಮುಖ್ಯ ಎಂದು ಕೇಯ್ಲೀ ಹೇಳಿದ್ದಾರೆ.