ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್ ಅವರ ವಿರುದ್ಧ ಅನುಚಿತ ಹೇಳಿಕೆ ನೀಡಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಡೆಮಾಕ್ರಾಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಮೊದಲ ಕಪ್ಪು ಮಹಿಳೆ ಕಮಲಾ ಹ್ಯಾರಿಸ್ ಬಗ್ಗೆ ಟ್ರಂಪ್ ಅನುಚಿತ ಹೇಳಿಕೆ ನೀಡಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್, ಕಮಲಾ ಹ್ಯಾರಿಸ್ ಕಪ್ಪು ಮಹಿಳೆ ಮತ್ತು ಅವರ ಪೋಷಕರು ವಲಸೆ ಬಂದವರು, ಶ್ವೇತಭವನದಲ್ಲಿ ಅವರಿಗೆ ಸೇವೆ ಸಲ್ಲಿಸುವ ಅರ್ಹತೆ ಇಲ್ಲ ಎಂಬ ಮಾತುಗಳನ್ನ ಕೇಳಿದ್ದೇನೆ. ವದಂತಿಗಳು 'ತುಂಬಾ ಗಂಭೀರ' ಎಂದು ಪರಿಗಣಿಸಿದ್ದೇನೆ ಎಂದು ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಸ್ವಲ್ಪ ಆಶ್ಚರ್ಯವಾಗಿದೆ. ಅಮೆರಿಕ ಸೆನೆಟ್ ನಲ್ಲಿ ಅತ್ಯಂತ ಕೆಟ್ಟ, ಭಯ ಸೃಷ್ಟಿಸುವ, ಯಾವುದೇ ಗೌರವ ಇಲ್ಲದ ವ್ಯಕ್ತಿ ಕಮಲಾ ಹ್ಯಾರಿಸ್ ಎಂದು ಟ್ರಂಪ್ ಕಿಡಿ ಕಾರಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಬಿಡೆನ್, ವರ್ಣಭೇದ ನೀತಿಯನ್ನು ಬೆಂಬಲಿಸಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
ಕ್ಯಾಲಿಫೋರ್ನಿಯಾದಿಂದ ಮೂರು ಬಾರಿ ಚುನಾಯಿತರಾಗಿರುವ ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ.