ವಾಷಿಂಗ್ಟನ್: ಅಮೆರಿಕದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನ ಎದುರಿಸಲು ಕಠಿಣ ಕ್ರಮ ಕೈಗೊಳ್ಳಲು ಟ್ರಂಪ್ ನಿರ್ಧರಿಸಿದ್ದಾರೆ. ಹೆಚ್ಚು ಹಿಂಸಾಚಾರ ನಡೆಯುತ್ತಿರುವ ಚಿಕಾಗೋ - ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ಗೆ ಹೆಚ್ಚಿನ ಭದ್ರತೆ ಒದಗಿಸಲು ಫೆಡರಲ್ ಏಜೆಂಟರನ್ನು ಕಳುಹಿಸುವುದಾಗಿ ಟ್ರಂಪ್ ಬುಧವಾರ ಘೋಷಣೆ ಮಾಡಿದ್ದಾರೆ.
ಮುಂಬರುವ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ನಿರ್ಧಾರ ಭಾರಿ ಕುತೂಹಲ ಕೆರಳುವಂತೆ ಮಾಡಿದೆ. ಹೆಚ್ಚುತ್ತಿರುವ ಹಿಂಸಾಚಾರದ ಹಿನ್ನೆಲೆ ಸ್ಥಳೀಯ ಆಡಳಿತದಲ್ಲಿ ಫೆಡರಲ್ ಎಜೆನ್ಸಿ ಹಸ್ತಕ್ಷೇಪ ಮಾಡಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅನಿವಾರ್ಯ ಎಂದು ಡೊನಾಲ್ಡ್ ಟ್ರಂಪ್ ತಮ್ಮ ಕ್ರಮ ಸಮರ್ಥಿಸಿಕೊಂಡಿದ್ದಾರೆ.
ಡೆಮಾಕ್ರಟಿಕ್ಸ್ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕಾನೂನು ಸುವ್ಯವಸ್ಥೆ ಹದ ಗೆಟ್ಟಿದೆ ಎಂದು ಆರೋಪಿಸಿರುವ ಟ್ರಂಪ್ ಹಿಂಸಾಚಾರಕ್ಕೆ ಡೆಮಾಕ್ರಟಿಕ್ಗಳ ಆಡಳಿತ ವೈಫಲ್ಯವೇ ಕಾರಣ ಎಂದು ಹರಿಹಾಯ್ದಿದ್ದಾರೆ. ಕಾನೂನು ತಜ್ಞರ ಸಲಹೆಯಂತೆ ಕೆಲ ಭಾಗಗಳಲ್ಲಿ ಫೆಡರಲ್ ಎಜೆನ್ಸಿಯನ್ನ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನ ಹಾಳು ಮಾಡಲು ಅಮೂಲಾಗ್ರ ಆಂದೋಲನ ನಡೆಸಿದೆ ಎಂದು ಇತ್ತೀಚಿಗಷ್ಟೇ ಟ್ರಂಪ್ ಆರೋಪಿಸಿದ್ದರು. ರಾಷ್ಟ್ರದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಗುಂಡಿನ ದಾಳಿ, ಹತ್ಯೆ, ಕೊಲೆ ಮತ್ತು ಹಿಂಸಾಚಾರದ ಭೀಕರ ಅಪರಾಧಗಳ ಹೆಚ್ಚಳ ಆಘಾತಕಾರಿ ಎಂದು ಕಳವಳ ವ್ಯಕ್ತಪಡಿಸಿದ್ದರು.