ವಾಷಿಂಗ್ಟನ್: ಅಮೆರಿಕನ್ನರಿಗೆ ಉದ್ಯೋಗ ನೀಡುವ ಅವಶ್ಯಕತೆಯಿದೆ ಎನ್ನುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್ ಕಾರ್ಡ್ ವಿತರಣೆಯನ್ನು ಈ ವರ್ಷಾಂತ್ಯದವರೆಗೆ ಸ್ಥಗಿತಗೊಳಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕಾರ್ಯನಿರ್ವಾಹಕ ಆದೇಶದ ಮೂಲಕ ಕಳೆದ ಏಪ್ರಿಲ್ ತಿಂಗಳಿನಲ್ಲಿ ಗ್ರೀನ್ ಕಾರ್ಡ್ಗಳ ವಿತರಣೆಯನ್ನು 90 ದಿನಗಳವರೆಗೆ ಟ್ರಂಪ್ ಸ್ಥಗಿತಗೊಳಿಸಿದ್ದರು. ಆದರೆ ಇದೇ ಸೋಮವಾರದಂದು ಕಾರ್ಡ್ ವಿತರಣೆಯನ್ನು ಡಿಸೆಂಬರ್ 31, 2020ರವರೆಗೆ ವಿಸ್ತರಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ.
ನಾವು ಇದೀಗ ಅಮೆರಿಕನ್ನರಿಗೆ ಉದ್ಯೋಗ ನೀಡಲು ಬಯಸುತ್ತೇವೆ. ಇದೀಗ ಇಲ್ಲಿನ ಉದ್ಯೋಗಗಳು ಅಮೆರಿಕ ನಾಗರಿಕರಿಗೆ ಹೋಗಬೇಕೆಂದು ನಾವು ಬಯಸುತ್ತೇವೆ. ಕೋವಿಡ್ -19 ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಅಮೆರಿಕನ್ನರಿಗೆ ನೆರವಾಗಲು ಈ ಹೆಜ್ಜೆ ಅತ್ಯಂತ ಅಗತ್ಯವಾಗಿದೆ ಎಂದು ಟ್ರಂಪ್ ಮಂಗಳವಾರ ಅರಿಜೋನಾದ ಸ್ಯಾನ್ ಲೂಯಿಸ್‌ನಲ್ಲಿ ತಿಳಿಸಿದ್ದಾರೆ.
ಗ್ರೀನ್ ಕಾರ್ಡ್(Green card) ಎಂದರೆ ಏನು?
ಗ್ರೀನ್ ಕಾರ್ಡ್ ಅಥವಾ ಶಾಶ್ವತ ನಿವಾಸದ ಕಾರ್ಡ್, ಅಮೆರಿಕದಲ್ಲಿ ಶಾಶ್ವತವಾಗಿ ವಾಸಿಸಲು ಮತ್ತು ಕೆಲಸ ಮಾಡಲು ವಿದೇಶಿಗರಿಗೆ ಅನುಮತಿ ನೀಡುವ ಕಾರ್ಡ್ ಆಗಿದೆ. ಗ್ರೀನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಕೆಲವೊಂದು ನಿಯಮಗಳಿರುತ್ತದೆ. ಅದು ಅರ್ಜಿದಾರನ ವೈಯಕ್ತಿಕ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ.
2020ರ ಫೆಬ್ರವರಿ ಮತ್ತು ಮೇ ತಿಂಗಳ ನಡುವೆ ದೇಶದ ಒಟ್ಟಾರೆ ನಿರುದ್ಯೋಗ ದರವು ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದೇ ಕಾರಣದಿಂದ ದೇಶದ ಜನರ ಸಿಟ್ಟು ಕಡಿಮೆ ಮಾಡುವುದು ಮತ್ತು ಮುಂಬರುವ ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಅಮೆರಿಕ ಅಧ್ಯಕ್ಷರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
ಭಾರತೀಯರಿಗೆ ದೊಡ್ಡ ಪೆಟ್ಟು: ಶೇ 80 ರಷ್ಟು ಭಾರತೀಯರು ಗ್ರೀನ್ ಕಾರ್ಡ್ ಪಡೆಯಲು ತುದಿಗಾಲ ಮೇಲೆ ನಿಂತಿದ್ದರು. ಇನ್ನು ಎಚ್ಎನ್ಬಿ 1 ವೀಸಾದ ಮೂಲಕ ಕೆಲಸ ಗಿಟ್ಟಿಸಿಕೊಳ್ಳಲು ಲಕ್ಷಕ್ಕೂ ಅಧಿಕ ಭಾರತೀಯರು ತುದಿಗಾಲ ಮೇಲೆ ನಿಂತಿದ್ದರು. ಈಗ ಟ್ರಂಪ್ ಕೈಗೊಂಡ ಕ್ರಮದಿಂದಾಗಿ ಭಾರತೀಯರು ನಿರಾಸರಾಗಿದ್ದಾರೆ. ಭಾರತೀಯರನ್ನ ಬಿಟ್ಟರೆ ಹೆಚ್ಚು ನಷ್ಟಕ್ಕೊಳಗಾಗುವವರು ಚೀನಿಯರು.
ಈ ನಡುವೆ ಟ್ರಂಪ್ ಕ್ರಮಕ್ಕೆ ಗೂಗಲ್ ಸಿಇಒ ಸುಂದರ್ ಪಿಚೈ ಬೇಸರ ವ್ಯಕ್ತಪಡಿಸಿದ್ದರು. ಅಮೆರಿಕ ಅಧ್ಯಕ್ಷರ ಘೋಷಣೆ ವಿರುದ್ಧ ಅವರು ಅಸಮಾಧಾನವನ್ನು ತೋಡಿಕೊಂಡು ವಲಸಿಗರ ಪರ ಬ್ಯಾಟಿಂಗ್ ಮಾಡಿದ್ದರು.