ವಾಷಿಂಗ್ಟನ್: ನಿರ್ದಿಷ್ಟ ವರ್ಗದ ಎಚ್-1 ಬಿ ವೀಸಾ ಹೊಂದಿರುವ ಭಾರತೀಯ ವ್ಯಕ್ತಿಗಳ ಸಂಗಾತಿಗಳು ಅಮೆರಿಕದಲ್ಲಿ ಉದ್ಯೋಗ ಮಾಡುವ ಅವಕಾಶಗಳು ಮುಂದುವರಿಯಲಿವೆ. ಒಬಾಮಾ ಅವಧಿಯಲ್ಲಿ ಇಂಥದೊಂದು ಅವಕಾಶ ನೀಡುವ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಪ್ರಸ್ತುತ ಈ ಕಾಯ್ದೆಯಿಂದ ಅಮೆರಿಕ ಪ್ರಜೆಗಳ ಉದ್ಯೋಗವಕಾಶದ ಮೇಲೆ ಪ್ರತಿಕೂಲ ಪರಿಣಾಮವಾಗದ್ದರಿಂದ ಈ ಕಾನೂನನ್ನು ರದ್ದುಗೊಳಿಸಬಾರದು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ನ್ಯಾಯಾಯಯಕ್ಕೆ ಮನವಿ ಮಾಡಿದೆ.
ಎಚ್-1 ಬಿ ವೀಸಾ ಹೊಂದಿದ ವ್ಯಕ್ತಿಯ ಕುಟುಂಬಸ್ಥರಿಗೆ (ಸಂಗಾತಿ ಮತ್ತು 21 ವರ್ಷದೊಳಗಿನ ಮಕ್ಕಳು) ಯುಎಸ್ ಸಿಟಿಜೆನ್ಶಿಪ್ ಆ್ಯಂಡ್ ಇಮಿಗ್ರೇಶನ್ ಸರ್ವಿಸಸ್ ಇಲಾಖೆಯು (US Citizenship and Immigration Services-USCIS) ಎಚ್-4 ವರ್ಗದ ವೀಸಾ ನೀಡುತ್ತದೆ. ಎಚ್-1 ಬಿ ವೀಸಾ ಹೊಂದಿರುವ ಬಹುತೇಕರು ಐಟಿ ಉದ್ಯೋಗಿಗಳೇ ಆಗಿದ್ದಾರೆ.
ಹೀಗೆ ಎಚ್-4 ವೀಸಾ ಪಡೆದವರು ಅಮೆರಿಕದಲ್ಲಿ ಉದ್ಯೋಗ ಮಾಡುವುದಕ್ಕೆ 2015 ರಲ್ಲಿ ಓಬಾಮಾ ಆಡಳಿತ ಅವಧಿಯಲ್ಲಿ ಅನುಮತಿ ನೀಡಲಾಗಿತ್ತು. ಅಮೆರಿಕದ ಶಾಶ್ವತ ನಾಗರಿಕತ್ವ ಪಡೆಯಲು ಕಾನೂನು ಪ್ರಕ್ರಿಯೆಗಳನ್ನು ಅನುಸರಿಸುತ್ತಿರುವವರಿಗೆ ವಿಶೇಷವಾಗಿ ಈ ರೀತಿ ನೌಕರಿ ಮಾಡುವ ಅವಕಾಶ ನೀಡಲಾಗಿತ್ತು.
ಯುಎಸ್ಸಿಐಎಸ್ ಪ್ರಕಾರ ಡಿಸೆಂಬರ್ 2017 ರಲ್ಲಿದ್ದಂತೆ ಎಚ್ - 4 ವೀಸಾ ಹೊಂದಿದ 1,26,853 ವ್ಯಕ್ತಿಗಳ ಉದ್ಯೋಗ ಅರ್ಜಿಗಳಿಗೆ ಅನುಮತಿ ನೀಡಲಾಗಿತ್ತು. 2018ರ ವರದಿಯೊಂದರ ಪ್ರಕಾರ ಎಚ್-4 ವೀಸಾ ಪಡೆದು ಉದ್ಯೋಗವಕಾಶ ಹೊಂದಿದವರಲ್ಲಿ ಶೇ.93 ರಷ್ಟು ಜನ ಭಾರತೀಯರೇ ಆಗಿದ್ದಾರೆ. ಇದರಲ್ಲಿ ಶೇ 5 ರಷ್ಟು ಮಾತ್ರ ಚೀನಿಯರಿದ್ದಾರೆ.
ಸದ್ಯ ಅಮೆರಿಕದ ಪ್ರಜೆಗಳಿಗೆ ಹೆಚ್ಚು ಉದ್ಯೋಗವಕಾಶ ಸಿಗಬೇಕೆಂಬ ಬೇಡಿಕೆಯೊಂದಿಗೆ ಅಮೆರಿಕದ ತಂತ್ರಜ್ಞಾನ ಉದ್ಯೋಗಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಎಚ್-1ಬಿ ವೀಸಾ ಸಂಗಾತಿಗಳಿಗೆ ಉದ್ಯೋಗವಕಾಶ ನೀಡುವ 2015ರ ಓಬಾಮಾ ಕಾಲದ ಕಾನೂನನ್ನು ಇವರು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಆದರೆ ಇವರಿಗೆ ಉದ್ಯೋಗವಕಾಶ ನೀಡಿದ್ದರಿಂದ ಅಮೆರಿಕ ಪ್ರಜೆಗಳ ಮೇಲೆ ಸರಿಪಡಿಸಲಾಗದ ಯಾವ ರೀತಿಯ ಹಾನಿಯೂ ಆಗುತ್ತಿಲ್ಲ ಎಂದು ಟ್ರಂಪ್ ಆಡಳಿತ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.