ಒಟ್ಟಾವಾ (ಕೆನಡಾ): ಕೋವಿಡ್-19ರಿಂದ ಉಂಟಾಗುವ ಬಜೆಟ್ ಕೊರತೆಗಳನ್ನು ಸರಿದೂಗಿಸಲು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ, ಅಲ್ಲಿನ ನಗರಗಳ ಅಭಿವೃದ್ಧಿಗೆ ಮೂಲಸೌಕರ್ಯದ ರೂಪದಲ್ಲಿ 2.2 ಬಿಲಿಯನ್ ಕೆನಡಿಯನ್ ಡಾಲರ್ (ಸುಮಾರು 1.6 ಶತಕೋಟಿ ಡಾಲರ್) ನೀಡುವುದಾಗಿ ಘೋಷಿಸಿದ್ದಾರೆ.
"ಕೆನಡಿಯನ್ನರನ್ನು ಸುರಕ್ಷಿತವಾಗಿರಿಸಲು ಮತ್ತು ನಮ್ಮ ಸಮುದಾಯಗಳನ್ನು ಸದೃಢವಾಗಿಡಲು ಇದು ಸಹಕಾರಿಯಾಗಲಿದೆ. ವ್ಯವಹಾರಗಳನ್ನು ಮತ್ತೆ ಪ್ರಾರಂಭಿಸುವ ವಿಶ್ವಾಸವನ್ನು ನೀಡಲಿದೆ. ಕಷ್ಟಪಟ್ಟು ದುಡಿಯುವ ಕೆನಡಿಯನ್ನರನ್ನು ಮತ್ತೆ ಕೆಲಸಕ್ಕೆ ಮರಳಿಸಲಿದೆ" ಎಂದು ಕೆನಡಾ ಪ್ರಧಾನಿ ಹೆಳಿದರು.
ಮೂಲ ಸೌಕರ್ಯ, ಸಾರ್ವಜನಿಕ ಸಾರಿಗೆ, ತ್ಯಾಜ್ಯನೀರಿನ ಸಂಸ್ಕರಣೆ, ಸ್ಥಳೀಯ ರಸ್ತೆಗಳು ಮತ್ತು ಸೇತುವೆಗಳು, ವಿಪತ್ತು ನಿರ್ವಹಣೆ, ಬ್ರಾಡ್‌ಬ್ಯಾಂಡ್ ಮತ್ತು ಸಂಪರ್ಕ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಮನರಂಜನೆ ಸೇರಿದಂತೆ 18 ವಿವಿಧ ವಿಭಾಗಗಳ ಅಡಿ ಯೋಜನೆಗಳಿಗಾಗಿ ಹಣ ಬಿಡುಗಡೆ ಮಾಡಲಾಗುವುದು.
ಕೆನಡಾದಲ್ಲಿ ಒಟ್ಟು 91,647 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. 7,325 ಸೋಂಕಿತರು ಸಾವನ್ನಪ್ಪಿದ್ದು, 49,225 ಮಂದಿ ಚೇತರಿಸಿಕೊಂಡಿದ್ದಾರೆ.