ಮಿನ್ಸ್ಕ್ಬೆ(ಬೆಲಾರಸ್): ಉಕ್ರೇನ್ ಮೇಲೆ ರಷ್ಯಾ ಮುಗಿಬಿದ್ದಿದೆ. ಮತ್ತೊಂದೆಡೆ ರಷ್ಯಾಗೆ ಅಷ್ಟೇ ದಿಟ್ಟತನದಿಂದ ಉಕ್ರೇನ್ ದಿಟ್ಟ ಉತ್ತರ ನೀಡುತ್ತಿದೆಯಾದರೂ ರಷ್ಯಾ ದೈತ್ಯ ಶಕ್ತಿ ಎದುರು ಹೋರಾಟ ಸಾಲದು ಎಂಬಂತೆ ತೋರುತ್ತಿದೆ. ಆದರೆ, ಪುಟಿನ್ ಭಾವಿಸಿದಂತೆ ಯುದ್ಧ ಗೆಲ್ಲುವುದು ಅಷ್ಟು ಸುಲಭ ಅಲ್ಲ ಎಂಬುದನ್ನು ಉಕ್ರೇನ್ ಕೆಚ್ಚೆದೆಯ ಸೈನಿಕರು ತೋರಿಸಿದ್ದಾರೆ.
ಈ ನಡುವೆ ರಷ್ಯಾ ಮತ್ತು ಉಕ್ರೇನ್ ನಡುವಣ ಮೂರನೇ ಸುತ್ತಿನ ಸಂಧಾನ ಮಾತುಕತೆಯೂ ಫಲಪ್ರದವಾಗಿಲ್ಲ. ಮಾತುಕತೆಯಿಂದ ಗಮನಾರ್ಹ ಪ್ರಗತಿ ಕಂಡು ಬಂದಿಲ್ಲ. ಬೆಲಾರಸ್ ಹಾಗೂ ಉಕ್ರೇನ್ ಗಡಿಭಾಗದ ತಟಸ್ಥ ಸ್ಥಳದಲ್ಲಿ ಉಭಯ ದೇಶಗಳ ಸಂಧಾನಕಾರರ ನಿಯೋಗಗಳು ಈ ಮಾತುಕತೆ ನಡೆಸಿವೆ.
ಗಮನಾರ್ಹ ಫಲಿತಾಂಶ ಪಡೆದುಕೊಳ್ಳಲು ಉಭಯ ದೇಶಗಳು ವಿಫಲವಾಗಿದ್ದರೂ,ಮಾನವೀಯ ಕಾರಿಡಾರ್ ರಚನೆ ವಿಷಯದಲ್ಲಿ ಎರಡೂ ಕಡೆ ಒಪ್ಪಿಗೆ ಸೂಚಿಸಲಾಗಿದೆ. ಈ ಮೂಲಕ ಒಂದು ಸಣ್ಣ ಪ್ರಗತಿ ಕಂಡುಕೊಳ್ಳಲಾಗಿದೆ ಎಂದು ಉಕ್ರೇನಿಯನ್ ನಿಯೋಗದ ಸದಸ್ಯ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ. ಕದನ ವಿರಾಮ ಮತ್ತು ಭದ್ರತಾ ಖಾತರಿಗಳ ಬಗ್ಗೆ ಮಾತುಕತೆ ವೇಳೆ ಸುದೀರ್ಘ ಸಮಾಲೋಚನೆ ಮುಂದುವರಿದಿದೆ ಎಂದು ಮೈಖೈಲೊ ಪೊಡೊಲ್ಯಾಕ್ ಹೇಳಿದ್ದಾರೆ.
ಇದೇ ವಿಷಯವಾಗಿ ಅವರು ಟ್ವೀಟ್ ಕೂಡಾ ಮಾಡಿ, ಮಾತುಕತೆ ಒಂದು ಸಣ್ಣ ಬೆಳ್ಳಿಕಿರಣ ಸೃಷ್ಟಿಸಿದೆ ಎಂಬ ಅಂಶವನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ರಷ್ಯಾದ ಅಧ್ಯಕ್ಷೀಯ ಸಹಾಯಕ ವ್ಲಾಡಿಮಿರ್ ಮೆಡಿನ್ಸ್ಕಿಮಾತನಾಡಿ, ರಾಜಕೀಯ ಮತ್ತು ಮಿಲಿಟರಿ ಅಂಶಗಳ ಮೇಲೆ ಇಂದಿನ ಮಾತುಕತೆ ವೇಳೆ ಚರ್ಚೆಗಳು ನಡೆದಿವೆ. ಆದಾಗ್ಯೂ ಸಂಧಾನ ಮಾತುಕತೆ ಕಷ್ಟಕರವಾಗಿದ್ದು, ಈಗಲೇ ಏನನ್ನು ಹೇಳಲು ಬರುವುದಿಲ್ಲ ಎಂದಿದ್ದಾರೆ.
ರಷ್ಯಾ ಸಂಧಾನಕಾರರು ಉಕ್ರೇನ್ ಮೇಲೆ ನಿರ್ದಿಷ್ಠ ಒಪ್ಪಂದಗಳಿಗೆ ಒಪ್ಪಿಕೊಳ್ಳುವಂತೆ ಪಟ್ಟು ಹಿಡಿದರು. ಆದರೆ ಇದಕ್ಕೆ ಉಕ್ರೇನ್ ಒಪ್ಪಿಗೆ ನೀಡಿಲ್ಲ ಹಾಗೂ ಕಡತಗಳಿಗೆ ಸಹಿ ಹಾಕಲು ನಿರಾಕರಿಸಿದರು. ಆದರೆ ಈ ಎಲ್ಲ ದಾಖಲೆಗಳನ್ನು ಅಧ್ಯಯನ ಮಾಡಲು ತೆಗೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಮಾತುಕತೆ ಸಫಲತೆ ಬಗ್ಗೆ ಮಾತನಾಡಿರುವ ಮೆಡಿನ್ಸ್ಕಿ, ’’ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮಾತುಕತೆಗಳಿಂದ ನಮ್ಮ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಆದರೆ, ಮುಂದಿನ ಬಾರಿ ನಾವು ಹೆಚ್ಚು ಮಹತ್ವದ ಹೆಜ್ಜೆ ಇಡಲು ಈ ಮಾತುಕತೆಯಿಂದ ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ‘‘ ಎಂದಿದ್ದಾರೆ. ನಿನ್ನೆ ಸುಮಾರು 3 ಗಂಟೆಗಳ ಕಾಲ ಸಂಧಾನ ಸಭೆ ನಡೆದಿದೆ ಎನ್ನುವುದು ಗಮನಾರ್ಹ
ಇದನ್ನು ಓದಿ: ರಷ್ಯಾ ಯುದ್ಧ ಟ್ಯಾಂಕ್ ವಶಕ್ಕೆ ಪಡೆದು ಸ್ವದೇಶದ ಬಾವುಟ ಹಾರಿಸಿದ ಉಕ್ರೇನ್ ಪ್ರಜೆ: ವಿಡಿಯೋ