ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮೇಲೆ ರಷ್ಯಾ ಆಕ್ರಮಣ 9ನೇ ದಿನಕ್ಕೆ ಕಾಲಿಟ್ಟಿದೆ. ಈಗಾಗಲೇ ರಷ್ಯಾ ಆಕ್ರಮಣಕ್ಕೆ ಹೆದರಿ ಸಾಕಷ್ಟು ಮಂದಿ ಉಕ್ರೇನ್ನಿಂದ ಪಲಾಯನ ಮಾಡಿದ್ದಾರೆ. ಅಕ್ಕಪಕ್ಕದ ರಾಷ್ಟ್ರಗಳಿಗೆ ಉಕ್ರೇನಿಗರು ತೆರಳುತ್ತಿದ್ದು, ಕೆಲವು ರಾಷ್ಟ್ರಗಳು ತಾತ್ಕಾಲಿಕ ಆಶ್ರಯವನ್ನು ನೀಡುತ್ತಿವೆ.
ಯುದ್ಧ ಆರಂಭವಾಗುವ ಮೊದಲಿನಿಂದಲೂ ಬೇರೆ ಬೇರೆ ರಾಷ್ಟ್ರಗಳಲ್ಲಿ ಉಳಿದಿರುವ ಉಕ್ರೇನ್ ಜನರು ತಮ್ಮ ರಾಷ್ಟ್ರಕ್ಕೆ ತೆರಳಲು ಹೆದರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ವಾಸ ಮಾಡುತ್ತಿರುವ ಉಕ್ರೇನ್ ಪ್ರಜೆಗಳಿಗೆ ಜೋ ಬೈಡನ್ ಸರ್ಕಾರ ರಿಲೀಫ್ ನೀಡಿದೆ. ಉಕ್ರೇನ್ ಜನರಿಗೆ ತಾತ್ಕಾಲಿಕ ಸಂರಕ್ಷಿತ ಸ್ಥಿತಿಯನ್ನು (Temporary Protected Status) 18 ತಿಂಗಳವರೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದು ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಕಾರ್ಯದರ್ಶಿ ಅಲೆಜಾಂಡ್ರೊ ಮೇಯೊರ್ಕಾಸ್ ಹೇಳಿದ್ದಾರೆ.
ತಾತ್ಕಾಲಿಕ ಸಂರಕ್ಷಿತ ಸ್ಥಿತಿ ಎಂದರೇನು?: ಯುದ್ಧ ಮತ್ತು ನೈಸರ್ಗಿಕ ವಿಕೋಪಗಳಿಂದ ಹಾನಿಗೊಳಗಾದ ದೇಶದ ನಾಗರಿಕರಿಗೆ ಅಮೆರಿಕ ತಾತ್ಕಾಲಿಕವಾಗಿ ಪರಿಹಾರ ಮತ್ತು ಆಶ್ರಯ ನೀಡುತ್ತದೆ. ಇದನ್ನೇ ತಾತ್ಕಾಲಿಕ ಸಂರಕ್ಷಿತ ಸ್ಥಿತಿ ಎಂದು ಕರೆಯುತ್ತಾರೆ. ಕನಿಷ್ಠ ಪಕ್ಷ ಮಂಗಳವಾರ (ಮಾರ್ಚ್ 1ರಂದು) ಅಮೆರಿಕದಲ್ಲಿರುವ ವ್ಯಕ್ತಿಗಳು ಈ ತಾತ್ಕಾಲಿಕ ಸಂರಕ್ಷಿತ ಸ್ಥಿತಿಯ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ.
ರಷ್ಯಾದೊಂದಿಗೆ ನೇರ ಸಂಪರ್ಕ: ಉಕ್ರೇನ್‌ನಲ್ಲಿನ ಯುದ್ಧಕ್ಕೆ ಸಂಬಂಧಿಸಿದಂತೆ ಅನಪೇಕ್ಷಿತ ಸಂಘರ್ಷವನ್ನು ತಪ್ಪಿಸಲು ಅಮೆರಿಕದ ರಕ್ಷಣಾ ಇಲಾಖೆ ರಷ್ಯಾದ ರಕ್ಷಣಾ ಸಚಿವಾಲಯದೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದೆ. ಮಾರ್ಚ್1 ರಿಂದ ಈ ಸಂಪರ್ಕ ಏರ್ಪಟ್ಟಿದ್ದು, ಮಿಲಿಟರಿ ಕಾರ್ಯಾಚರಣೆ ವೇಳೆ ನಡೆಯುವ ಅನಿರೀಕ್ಷಿತ ಅವಘಡಗಳನ್ನು ತಪ್ಪಿಸಲು ಅಮೆರಿಕ ರಕ್ಷಣಾ ಇಲಾಖೆ ಈ ಸಂಪರ್ಕವನ್ನು ರಚಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅತಿ ದೊಡ್ಡ ಅಣು ವಿದ್ಯುತ್ ಸ್ಥಾವರದತ್ತ ರಷ್ಯಾ ಪಡೆ : ರಷ್ಯಾದ ಪಡೆಗಳ ಅತಿ ದೊಡ್ಡ ತುಕಡಿ ಅತಿದೊಡ್ಡ ಪರಮಾಣು ಸ್ಥಾವರವಾದ ಜಪೊರಿಝಿಯಾ ಕಡೆಗೆ ಸಾಗುತ್ತಿದೆ ಎಂದು ಉಕ್ರೇನಿಯನ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಪರಮಾಣು ಸ್ಥಾವರ ಉಕ್ರೇನ್‌ನಲ್ಲಿ ಒಟ್ಟು ಉತ್ಪಾದನೆಯಾಗುವ ವಿದ್ಯುತ್ನ ಕಾಲು ಭಾಗದಷ್ಟು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ಅಂದಹಾಗೆ ಈ ವಿದ್ಯುತ್ ಸ್ಥಾವರ ಯೂರೋಪಿನ ಅತಿ ದೊಡ್ಡ ವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ.
ಜಪೊರಿಝಿಯಾ ವಿದ್ಯುತ್ ಸ್ಥಾವರದ ಸಮೀಪದಲ್ಲಿ ರಾತ್ರಿ ಭಾರಿ ಗುಂಡಿನ ಶಬ್ದ ಕೇಳಿಬಂದಿದೆ ಎಂದು ಉಕ್ರೇನಿಯನ್ ಪರಮಾಣು ಶಕ್ತಿ ಕಂಪನಿ ಎನರ್‌ಗೋಟಮ್ ಮತ್ತು ಎನರ್ಹೋಡರ್ನ ಮೇಯರ್ ಡಿಮಿಟ್ರೋ ಓರ್ಲೋವ್ ಮಾಹಿತಿ ನೀಡಿದ್ದಾರೆ.
ಉಕ್ರೇನಿಯನ್ ಪ್ರಧಾನ ಮಂತ್ರಿ ಡೆನಿಸ್ ಶ್ಮಿಹಾಲ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೋಡಿಮೀರ್ ಝೆಲೆನ್ಸ್ಕಿ ಪರಮಾಣು ಸ್ಥಾವರಗಳನ್ನು ರಕ್ಷಿಸಲು, ಆ ಪ್ರದೇಶ ಬಳಿಗೆ ವಿಮಾನ ಹಾರಾಟವನ್ನು ನಿರ್ಬಂಧಿಸುವಂತೆ ಅಮೆರಿಕ ಮತ್ತು ನ್ಯಾಟೋ ಪಡೆಗಳಿಗೆ ಮನವಿ ಮಾಡಿದ್ದಾರೆ.
ಕೆಲವು ಯುವಕರು ಅಥ್ಲೆಟಿಕ್ ಬಟ್ಟೆಗಳನ್ನು ಧರಿಸಿ, ಬಂದೂಕುಗಳನ್ನು ಹಿಡಿದು ನಗರಕ್ಕೆ ಬಂದಿದ್ದಾರೆ. ಅವರು ಸ್ಥಳೀಯರು ವಾಸಿಸುವ ಅಪಾರ್ಟ್ಮೆಂಟ್ಗಳಿಗೆ ನುಗ್ಗಿ ಮನೆಗಳ ಬಾಗಿಲು ಮುರಿದು ಒಳನುಗ್ಗಲು ಯತ್ನಿಸುತ್ತಿದ್ದಾರೆ ಎಂದು ಎನರ್‌ಗೋಟಮ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಗೆರ್ಹಾರ್ಡ್ ಶ್ರೋಡರ್ ರಾಜೀನಾಮೆಗೆ ಸಲಹೆ: ರಷ್ಯಾದ ಆಕ್ರಮಣಕಾರಿ ನೀತಿಯನ್ನು ವಿರೋಧಿಸಲು ಜರ್ಮನಿ ಮುಂದಾಗಿದೆ. ರಷ್ಯಾದ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಅಲಂಕರಿಸಿರುವ ಹಲವಾರು ಹುದ್ದೆಗಳಿಗೆ ರಾಜೀನಾಮೆ ನೀಡುವಂತೆ ಮಾಜಿ ಚಾನ್ಸೆಲರ್ ಗೆರ್ಹಾರ್ಡ್ ಶ್ರೋಡರ್ ಅವರಿಗೆ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಸಲಹೆ ನೀಡಿದ್ದಾರೆ.
ಶ್ರೋಡರ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ದೀರ್ಘಕಾಲದ ಸ್ನೇಹಿತರಾಗಿದ್ದು, ಜರ್ಮನಿಯಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಈ ಟೀಕೆ ಮತ್ತಷ್ಟು ತೀವ್ರಗೊಂಡಿದೆ. ಅಂದಹಾಗೆ ಶ್ರೋಡರ್ ರಷ್ಯಾದ ಇಂಧನ ಕಂಪನಿ ರಾಸ್ನೆಫ್ಟ್‌ನ ಮೇಲ್ವಿಚಾರಣಾ ಮಂಡಳಿಯ ಅಧ್ಯಕ್ಷರಾಗಿರುವುದು ಮಾತ್ರವಲ್ಲದೇ, ರಷ್ಯಾದಿಂದ ಜರ್ಮನಿಗೆ ಅನಿಲ ಸಾಗಿಸುವ ನಾರ್ಡ್ ಸ್ಟ್ರೀಮ್ 1 ಮತ್ತು ನಾರ್ಡ್ ಸ್ಟ್ರೀಮ್ 2 ಪೈಪ್‌ಲೈನ್ ಯೋಜನೆಗಳಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿದ್ದಾರೆ.
1998ರಿಂದ 2005ರವರೆಗೆ ಜರ್ಮನಿಯ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದ ಶ್ರೋಡರ್, ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು.
ತೈಲ ಉತ್ಪಾದನೆ ಹೆಚ್ಚಿಸಲು ಕರೆ: ರಷ್ಯಾದ ಮೇಲೆ ನಿರ್ಬಂಧದಿಂದಾಗಿ ಯೂರೋಪ್ನ ಹಲವು ರಾಷ್ಟ್ರಗಳು ತೈಲ ಮತ್ತು ಅನಿಲ ಕಂಪನಿ ಕೊರತೆಯನ್ನು ಎದುರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತೈಲ ಮತ್ತು ಅನಿಲ ಉತ್ಪಾದನೆಯನ್ನು ಹೆಚ್ಚಿಸಲು ಅಮೆರಿಕ ಮುಂದಾಗಬೇಕೆಂದು ಇಂಧನ ಕೈಗಾರಿಕೆಗಳು ಬೈಡನ್ಗೆ ಸಲಹೆ ನೀಡಿವೆ.
ಅಮೆರಿಕನ್ ಪೆಟ್ರೋಲಿಯಂ ಇನ್ಸ್ಟಿಟ್ಯೂಟ್ ಫೆಡರಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸರ್ಕಾರವು ತೈಲ ಉತ್ಪಾದನೆಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಬೇಕು. ದ್ರವೀಕೃತ ನೈಸರ್ಗಿಕ ಅನಿಲ (LNG) ರಫ್ತು ಟರ್ಮಿನಲ್ಗಳನ್ನು ವಿಸ್ತರಿಸಲು ಅನುಮತಿ ನೀಡುವ ಪ್ರಕ್ರಿಯೆಯನ್ನು ಸುಗಮಗೊಳಿಸಬೇಕು. ತೈಲ ಆಮದಿನ ಮೇಲೆ ಅಮೆರಿಕ ಕಡಿಮೆ ಅವಲಂಬಿತವಾದರೂ, ಹೆಚ್ಚು ಉತ್ಪಾದನೆ ಮಾಡುವ ಮೂಲಕ ಯೂರೋಪ್ಗೆ ಹೆಚ್ಚು ರಫ್ತು ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಉಕ್ರೇನ್ - ರಷ್ಯಾ ಪಡೆಗಳ ಭೀಕರ ಕಾಳಗ.. ಹೊತ್ತಿ ಉರಿಯುತ್ತಿರುವ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ
ರಷ್ಯಾ ಈಗ ತೈಲ ರಫ್ತು ಮಾಡುವುದನ್ನು ನಿಲ್ಲಿಸಿದ್ದು, ಈಗ ತೈಲ ಕೊರತೆಯಾಗದಂತೆ ತಡೆಯಲು ಸುಮಾರು 30 ಮಿಲಿಯನ್ ಬ್ಯಾರೆಲ್ ತೈಲವನ್ನು ಅಮೆರಿಕ ಬಿಡುಗಡೆ ಮಾಡುವುದಾಗಿ ಅಮೆರಿಕ ಮಂಗಳವಾರ ಘೋಷಿಸಿದೆ. ಈ ಮೂಲಕ ಯೂರೋಪಿಯನ್ ರಾಷ್ಟ್ರಗಳಿಗೆ ನೆರವಾಗಲಿದೆ.