ಮಾಸ್ಕೋ : ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆ ಘೋಷಣೆ ಮಾಡಿದಾಗಿನಿಂದಲೂ ಸಾವಿರಾರು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಷ್ಯಾ ದಾಳಿಗೆ ಪ್ರತೀಕಾರವಾಗಿ ಉಕ್ರೇನ್ ಸಹ ಪ್ರತಿದಾಳಿ ನಡೆಸಿದೆ. ಇದರಲ್ಲಿ 3,500ಕ್ಕೂ ಹೆಚ್ಚು ರಷ್ಯನ್ ಸೈನಿಕರು ಹತರಾಗಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ.
ರಷ್ಯಾವು ಉಕ್ರೇನ್ ವಿರುದ್ಧ ಆಕ್ರಮಣ ಪ್ರಾರಂಭಿಸಿದ ಬಳಿಕ ಇದೇ ಮೊದಲ ಬಾರಿಗೆ ರಷ್ಯಾ, ತಮ್ಮ ಸೈನಿಕರು ಸಹ ಸಾವು-ನೋವುಗಳನ್ನು ಅನುಭವಿಸಿದ್ದಾರೆ ಎಂದು ಒಪ್ಪಿಕೊಂಡಿದೆ.
ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಇಗೋರ್ ಕೊನಶೆನ್ಕೊವ್ ಅವರು ದಾಳಿಯಲ್ಲಿ ನಮ್ಮ ಸೈನಿಕರು ಸಹ ಸಾವನ್ನಪ್ಪಿದ್ದಾರೆ, ಅನೇಕರು ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಆದರೆ, ನಿಖರ ಸಂಖ್ಯೆ ಎಷ್ಟು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಉಕ್ರೇನ್ ಪಡೆಗಳ ನಷ್ಟಕ್ಕೆ ಹೋಲಿಸಿದರೆ, ರಷ್ಯನ್ ಸೇನೆಗೆ ಆಗಿರುವ ಹಾನಿ ಹಲವು ಪಟ್ಟು ಕಡಿಮೆ ಎಂದು ಹೇಳಿಕೊಂಡಿದ್ದಾರೆ. ಉಕ್ರೇನ್ ಪಡೆಗಳು 3,500 ರಷ್ಯಾದ ಸೈನಿಕರನ್ನು ಕೊಂದಿದ್ದೇವೆ ಎಂದು ಹೇಳಿಕೊಂಡಿವೆ.
ಗುರುವಾರ ದಾಳಿ ಪ್ರಾರಂಭವಾದಾಗಿನಿಂದ ರಷ್ಯಾದ ಮಿಲಿಟರಿ, 27 ಕಮಾಂಡ್ ಪೋಸ್ಟ್‌ಗಳು ಮತ್ತು ಸಂವಹನ ಕೇಂದ್ರಗಳು, 38 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ಮತ್ತು 56 ರಾಡಾರ್ ಕೇಂದ್ರಗಳು ಸೇರಿದಂತೆ 1,067 ಉಕ್ರೇನಿಯನ್ ಮಿಲಿಟರಿ ಪಡೆಯನ್ನ ಹೊಡೆದುರುಳಿಸಿದೆ ಎಂದು ಕೊನಶೆನ್ಕೊವ್ ಹೇಳಿದ್ದಾರೆ.