ರಷ್ಯಾದ ಉಕ್ರೇನ್ ಮೇಲೆ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಕೆಲವು ಪ್ರದೇಶಗಳಲ್ಲಿ ಉಕ್ರೇನ್ ಮತ್ತು ರಷ್ಯಾಗಳು ಪರಸ್ಪರ ಸಂಘರ್ಷ ನಡೆಸಿವೆ. ಬಹುತೇಕ ಸೇನಾ ನೆಲೆಗಳು,ವಿಮಾನ ನಿಲ್ದಾಣಗಳು, ಬಂದರುಗಳನ್ನು ರಷ್ಯಾ ಆಕ್ರಮಿಸಿಕೊಂಡಿದೆ. ರಷ್ಯಾದ ಸುಮಾರು 400ಕ್ಕೂ ಹೆಚ್ಚು ಮಂದಿ ಸೈನಿಕರು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಹೇಳಿದ್ದು, ಉಕ್ರೇನ್ ಸೈನಿಕರ ಸಾವು ನೋವಿನ ಬಗ್ಗೆ ಇತ್ತೀಚಿನ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಸಾವು- ನೋವು ಮಾತ್ರವಲ್ಲದೇ ಯುದ್ಧಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕ ಘಟನೆಗಳು ರಷ್ಯಾ ಆಕ್ರಮಣ ಎರಡನೇ ದಿನ ನಡೆದಿದ್ದು, ಟಾಪ್ 10 ಘಟನೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.
- ರಷ್ಯಾದ ಯುದ್ಧ ವಿಮಾನವೊಂದನ್ನು ಕೀವ್ ಶುಕ್ರವಾರ ಮುಂಜಾನೆ ಉಕ್ರೇನ್ ಹೊಡೆದುರುಳಿಸಿದೆ. ಆ ವಿಮಾನ ಪತನಗೊಂಡು ಉಕ್ರೇನ್ನ ವಸತಿ ಕಟ್ಟಡಕ್ಕೆ ಅಪ್ಪಳಿಸಿ, ಬೆಂಕಿ ಅವಘಡ ಉಂಟಾಗಿದೆ. ಈ ಬೆಂಕಿಯನ್ನು ಸಿಬ್ಬಂದಿ ನಂದಿಸಿದ್ದು, ಕಟ್ಟಡಕ್ಕೆ ಹಾನಿಯಾಗಿದೆ.
- ಪರಮಾಣು ಅಸ್ತ್ರಗಳನ್ನು ಇಟ್ಟಿರುವ ಶಂಕೆ ಹಿನ್ನೆಲೆಯಲ್ಲಿ ಉಕ್ರೇನ್ನ ಚೆರ್ನೋಬಿಲ್ ನಗರದ ಮೇಲೆ ರಷ್ಯಾ ಪಡೆಗಳು ದಾಳಿ ನಡೆಸಿವೆ. ಉಕ್ರೇನ್ ಪಡೆಗಳೊಂದಿಗೆ ಭಾರಿ ಸಂಘರ್ಷದ ನಂತರ ಚೆರ್ನೋಬಿಲ್ ಅಣುವಿದ್ಯುತ್ ಸ್ಥಾವರ ರಷ್ಯಾ ಪಡೆಗಳ ಪಾಲಾಗಿದೆ.
- ರಷ್ಯಾ ಅಧ್ಯಕ್ಷ ಪುಟಿನ್ ಅವರ ಆಕ್ರಮಣಕಾರಿ ನೀತಿಯನ್ನು ಉಲ್ಲಂಘಿಸಿ, ಯೂರೋಪ್ನ ಹಲವು ರಾಷ್ಟ್ರಗಳಿಂದ ರಷ್ಯಾದ ಮೇಲೆ ನಿರ್ಬಂಧ ವಿಧಿಸಲಾಗಿದೆ. ಇಷ್ಟು ಮಾತ್ರವಲ್ಲದೇ ಏಷ್ಯಾದ ರಾಷ್ಟ್ರಗಳಾದ ತೈವಾನ್ ಮತ್ತು ಕುವೈತ್ ಕೂಡಾ ನಿರ್ಬಂಧವನ್ನು ಘೋಷಿಸಿದೆ.
- ರಷ್ಯಾದ ಪಡೆಗಳು ಕೀವ್ ಅನ್ನು ತಲುಪುತ್ತಿದ್ದಂತೆ ಜನರನ್ನು ಉದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲನ್ಸ್ಕಿ, ಯಾವುದೇ ಕಾರಣಕ್ಕೂ ಉಕ್ರೇನ್ ತೊರೆಯುವುದಿಲ್ಲ ಎಂದು ಹೇಳಿದ್ದಾರೆ. ಉಕ್ರೇನ್ಗೆ ಮಾನವೀಯ ನೆರವು ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭರವಸೆ ನೀಡಿದ್ದಾರೆ.
- ಪುಟಿನ್ ಅವರ ಆಕ್ರಮಣಕಾರಿ ಧೋರಣೆಯ ವಿರುದ್ಧ ಸ್ವತಃ ರಷ್ಯನ್ನರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಸಾವಿರಾರು ಜನರು ಪುಟಿನ್ ವಿರುದ್ಧ ಪ್ರತಿಭಟನೆ ನಡೆಸಿದ್ದು,'ಯುದ್ಧ ಬೇಡ' ಎಂದು ಘೋಷಣೆಗಳನ್ನು ಕೂಗಿದ್ದಾರೆ.
- ಉಕ್ರೇನ್- ರಷ್ಯಾ ಯುದ್ಧ ವಿಚಾರದಲ್ಲಿ ತಟಸ್ಥ ನೀತಿಯನ್ನು ಶ್ರೀಲಂಕಾ ಅನುಸರಿಸಿದೆ. ಎರಡು ರಾಷ್ಟ್ರಗಳು ತಮ್ಮದೇ ಆದ ಕಾರಣಗಳನ್ನು ಹೊಂದಿವೆ. ನಾವು ಯಾವುದೇ ರಾಷ್ಟ್ರಕ್ಕೆ ಬೆಂಬಲ ಸೂಚಿಸುವುದಿಲ್ಲ ಎಂದು ಶ್ರೀಲಂಕಾ ವಿದೇಶಾಂಗ ಕಾರ್ಯದರ್ಶಿ ಜಯಂತ್ ಕೊಲೊಂಬಾಗೆ ಹೇಳಿಕೆ ನೀಡಿದ್ದಾರೆ.
- ಯುದ್ಧ ಪೀಡಿತ ಉಕ್ರೇನ್ನಲ್ಲಿ ಭಾರತದ ಚೆಸ್ ಆಟಗಾರ ಅನ್ವೇಷ್ ಉಪಾಧ್ಯಾಯ್ ಸಿಲುಕಿದ್ದು, 'ಉಕ್ರೇನ್ ಪರಿಸ್ಥಿತಿ ಊಹಿಸಲು ಸಾಧ್ಯವಾಗದಷ್ಟು ದಾರುಣವಾಗಿದೆ ಎಂದಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರುವುದಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.
- ಉಕ್ರೇನ್- ರಷ್ಯಾ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ಹಾಗೂ ವಿಶ್ವಸಂಸ್ಥೆಯ ಮಕ್ಕಳ ತುರ್ತು ನಿಧಿಯ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ರಷ್ಯಾ ದಾಳಿಯನ್ನು ಭಯಾನಕವಾಗಿದೆ ಎಂದಿದ್ದಾರೆ. ಅಮಾಯಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
- ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ನಿಲ್ಲಿಸಲು ಒತ್ತಾಯ ಮಾಡಬೇಕೆಂದು ಜಪಾನ್‌ನಲ್ಲಿರುವ ಉಕ್ರೇನಿಯನ್ ರಾಯಭಾರಿ ಸೆರ್ಗಿ ಕೊರ್ಸುನ್ಸ್ಕಿ ಚೀನಾಗೆ ಮನವಿ ಮಾಡಿದ್ದಾರೆ. 21ನೇ ಶತಮಾನದಲ್ಲೂ ಈ ರೀತಿಯ ಬರ್ಬರ ದಾಳಿ ಒಪ್ಪಿತವಲ್ಲ ಎಂದು ಟೋಕಿಯೋದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
- ಬ್ರಿಟನ್ ಸೇರಿದಂತೆ ಯೂರೋಪ್ನ ಹಲವು ರಾಷ್ಟ್ರಗಳು ಉಕ್ರೇನ್ ಮೇಲಿನ ದಾಳಿಯನ್ನು ಖಂಡಿಸಿ, ರಷ್ಯಾದ ಮೇಲೆ ಹಲವು ರೀತಿಯ ನಿರ್ಬಂಧಗಳನ್ನು ಹೇರಿವೆ. ಈ ಬೆನ್ನಲ್ಲೇ ಕ್ರಮ ಕೈಗೊಂಡಿರುವ ರಷ್ಯಾ ಬ್ರಿಟಿಷ್ ವಿಮಾನಗಳನ್ನು ತನ್ನ ದೇಶದೊಳಗೆ ಬರದಂತೆ ನಿರ್ಬಂಧಿಸಿ, ಪ್ರತೀಕಾರ ತೀರಿಸಿಕೊಂಡಿದೆ.