ನ್ಯೂಯಾರ್ಕ್(ಅಮೆರಿಕ) : ಉತ್ತರ ಕೊರಿಯಾ ಇತ್ತೀಚೆಗೆ ಕ್ಷಿಪಣಿಗಳನ್ನು ಪರೀಕ್ಷೆ ಮಾಡಿದ ಹಿನ್ನೆಲೆಯಲ್ಲಿ ಆ ದೇಶದ ಐವರು ಅಧಿಕಾರಿಗಳ ಮೇಲೆ ವಿಶ್ವಸಂಸ್ಥೆಯಲ್ಲಿ ನಿರ್ಬಂಧ ಹೇರಲು ಮುಂದಾದ ಅಮೆರಿಕ ಯತ್ನವನ್ನು ಚೀನಾ ಮತ್ತು ರಷ್ಯಾ ತಡೆದಿವೆ ಎಂದು ಮೂಲಗಳು ತಿಳಿಸಿವೆ.
ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆ ನಡೆಯಿತು. ಈ ಸಭೆಯಲ್ಲಿ ರಷ್ಯಾ ಮತ್ತು ಚೀನಾಗಳು ಉತ್ತರ ಕೊರಿಯಾದ ರಕ್ಷಣೆಗೆ ನಿಂತಿವೆ. ಉತ್ತರ ಕೊರಿಯಾ ಕ್ಷಿಪಣಿಗಳ ಪರೀಕ್ಷೆ ಮಾಡಿದ ನಂತರದ ಎರಡು ವಾರಗಳಲ್ಲಿ ಇದು ಎರಡನೇ ಸಭೆಯಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಸೋಮವಾರ ಎರಡು ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿರುವುದಾಗಿ ಉತ್ತರ ಕೊರಿಯಾ ದೃಢಪಡಿಸಿದೆ. ಕೊರಿಯಾದ ಪೂರ್ವ ಸಮುದ್ರದಲ್ಲಿದ್ದ ಗುರಿಯನ್ನು ನಿಖರವಾಗಿ ಹೊಡೆದು ಕ್ಷಿಪಣಿಗಳ ಪರೀಕ್ಷೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಒಂದು ತಿಂಗಳಲ್ಲಿ ನಾಲ್ಕು ಬಾರಿ ಕ್ಷಿಪಣಿ ಪರೀಕ್ಷೆಗಳನ್ನು ಮಾಡಲಾಗಿದ್ದು, ಈ ಹಿಂದೆ ಎರಡು ಬಾರಿ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಪರೀಕ್ಷೆ ಮಾಡಿಕೊಂಡಿರುವುದಾಗಿ ಉತ್ತರ ಕೊರಿಯಾ ಹೇಳಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ವಿಶ್ವಸಂಸ್ಥೆಯಲ್ಲಿರುವ ಅಮೆರಿಕ ರಾಯಭಾರಿ ಲಿಂಡಾ-ಥಾಮಸ್ ಗ್ರೀನ್‌ಫೀಲ್ಡ್ ಯುಕೆ, ಫ್ರಾನ್ಸ್, ಐರ್ಲೆಂಡ್, ಜಪಾನ್ ಮತ್ತು ಹಲವಾರು ಇತರ ದೇಶಗಳು ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆಯನ್ನು ಖಂಡಿಸಲು ಭದ್ರತಾ ಮಂಡಳಿಯನ್ನು ಒತ್ತಾಯಿಸುತ್ತಿವೆ ಎಂದಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಈಗ ಉತ್ತರ ಕೊರಿಯಾದ ಅಧಿಕಾರಿಗಳಿಗೆ ವಿಶ್ವಸಂಸ್ಥೆಯಲ್ಲಿ ನಿರ್ಬಂಧ ಹೇರಲು ಮುಂದಾದ ಅಮೆರಿಕ ಯತ್ನವನ್ನು ರಷ್ಯಾ ಮತ್ತು ಚೀನಾಗಳು ತಡೆದಿದ್ದು, ಇನ್ನು ಮುಂದೆಯೂ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ನೌಕೆ ಸಂಚಾರ: ಚೀನಾ ಪ್ರಾಬಲ್ಯಕ್ಕೆ ಎಚ್ಚರಿಕೆ