ವಾಷಿಂಗ್ಟನ್(ಅಮೆರಿಕ): ಜನವರಿ 6 ರಂದು ಕ್ಯಾಪಿಟಲ್ ಮೇಲೆ ನಡೆದ ದಾಳಿ ಕೇವಲ ಚುನಾವಣೆಯ ಹಿನ್ನೆಲೆ ಹೊಂದಿರಲಿಲ್ಲ. ಬದಲಾಗಿ ವರ್ಣಭೇದ ನೀತಿ ಮತ್ತು ದೇಶದ್ರೋಹದ ಆರೋಪಗಳು ಮುಖ್ಯವಾಗಿ ಕಂಡುಬಂದವು ಎಂದು ಯುಎಸ್ ಕ್ಯಾಪಿಟಲ್ ಪೊಲೀಸರು ಮತ್ತು ಡಿಸಿಯ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯ ಅಧಿಕಾರಿಗಳು ವಿವರಿಸಿದ್ದಾರೆ.
ಈ ಅಧಿಕಾರಿಗಳು ಕ್ಯಾಪಿಟಲ್ ಮೇಲಿನ ಹಿಂಸಾತ್ಮಕ ದಾಳಿಯ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆ ಸಂದರ್ಭದಲ್ಲಿ ಗಲಭೆ ವರ್ಣಭೇದ ನೀತಿ ಮತ್ತು ಧರ್ಮಾಂಧತೆಯೆಡೆಗೆ ಹೇಗೆ ತಿರುಗಿತು ಎಂಬುದನ್ನು ವಿವರಿಸಿದ್ದಾರೆ.
"ಇದು ತುಂಬಾ ನಿರಾಶಾದಾಯಕವಾಗಿದೆ. ಜನರು ನಿಮ್ಮ ಚರ್ಮದ ಬಣ್ಣದಿಂದ ನಿಮ್ಮ ಮೇಲೆ ಆಕ್ರಮಣ ಮಾಡುವಂತಾಗಿದೆ. ಆದರೆ ನನ್ನ ರಕ್ತ ಕೆಂಪಾಗಿದೆ. ನಾನು ಒಬ್ಬ ಪೊಲೀಸ್ ಅಧಿಕಾರಿ. ಜೊತೆಗೆ ಅಮೆರಿಕನ್ ಪ್ರಜೆ" ಎಂದು ಡನ್ ಎಂಬ ಅಧಿಕಾರಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಜನವರಿ 6 ರಂದು ಗಲಭೆಕೋರರನ್ನು ಎದುರಿಸುವಾಗ, "ನಿಮ್ಮ ಬಂದೂಕನ್ನು ಕೆಳಕ್ಕೆ ಇರಿಸಿ ಮತ್ತು ನೀವು ನಿಜವಾಗಿಯೂ ಯಾವ ರೀತಿಯವರು ಎಂದು ನಾವು ನಿಮಗೆ ತೋರಿಸುತ್ತೇವೆ" ಎಂದು ವ್ಯಕ್ತಿಯೊಬ್ಬ ನಮಗೆ ಹೇಳಿದ ಎಂದು ಡನ್ ಹೇಳಿದರು. ಅಷ್ಟೇ ಅಲ್ಲದೆ, ಯು.ಎಸ್. ಪೊಲೀಸ್ ಪಡೆಗಳಲ್ಲಿ ನೇಮಕಾತಿ ನಡೆಸುವ ಸಂದರ್ಭದಲ್ಲಿ ವರ್ಣಭೇದ ನೀತಿ ಕಂಡುಬರುತ್ತದೆ. ಆದರೆ ಅವೆಲ್ಲವನ್ನು ನಾವು ಸಹಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಜನವರಿಯಲ್ಲಿ, ಕ್ಯಾಪಿಟಲ್ ಮೇಲಿನ ದಾಳಿಯಿಂದ ಚಿತ್ರಗಳು ಮತ್ತು ವಿಡಿಯೋಗಳು ಹೊರಹೊಮ್ಮುತ್ತಿದ್ದಂತೆ ಗಲಭೆಕೋರರಲ್ಲಿ ಜನಾಂಗೀಯ ಮತ್ತು ಯೆಹೂದ್ಯ ವಿರೋಧಿ ಅಂಶವು ಸ್ಪಷ್ಟವಾಗಿ ಕಂಡುಬಂದಿತ್ತು.