ವಾಷಿಂಗ್ಟನ್, ಅಮೆರಿಕ: ಬಹುನಿರೀಕ್ಷಿತ ಕ್ವಾಡ್ ನಾಯಕರ ಸಭೆ ಅಂತ್ಯಗೊಂಡಿದ್ದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿ ಆಹ್ವಾನಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಪ್ರಧಾನಿ ಮೋದಿ ಬೈಡನ್ ಅವರನ್ನು ದೇಶಕ್ಕೆ ಆಹ್ವಾನಿಸಿದ್ದಾರೆ. ಆದಷ್ಟೂ ಶೀಘ್ರವಾಗಿ ಬೈಡನ್ ಭಾರತಕ್ಕೆ ಆಗಮಿಸುವುದನ್ನು ದೇಶ ಎದುರು ನೋಡುತ್ತಿದೆ. ಬೈಡನ್ ಕೂಡಾ ಧನ್ಯವಾದ ಅರ್ಪಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಶ್ರಿಂಗ್ಲಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂರು ದಿನಗಳ ಅಮೆರಿಕ ಭೇಟಿ ಕೈಗೊಂಡಿದ್ದ ಪ್ರಧಾನಿ ಮೋದಿ ಅಮೆರಿಕ ನೇತೃತ್ವದಲ್ಲಿ ನಡೆದ ಕ್ವಾಡ್ ನಾಯಕರ ಸಭೆಯಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ನ ನಾಯಕರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ಹಮ್ಮಿಕೊಂಡಿದ್ದರು.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ಮತ್ತು ವೈಯಕ್ತಿಕ ಸಭೆಯನ್ನೂ ನಡೆಸಿದ ಮೋದಿ, ಕಮಲಾ ಹ್ಯಾರಿಸ್ ಅವರನ್ನು ಸ್ಫೂರ್ತಿಯ ಮೂಲ ಎಂದು ಬಣ್ಣಿಸಿದ್ದು ಮಾತ್ರವಲ್ಲದೇ, ಭಾರತಕ್ಕೆ ಭೇಟಿ ನೀಡಲು ಕಮಲಾ ಹ್ಯಾರಿಸ್ ಅವರಿಗೂ ಆಹ್ವಾನ ನೀಡಿದ್ದರು.
ಇದನ್ನೂ ಓದಿ: ಜಗತ್ತಿನ ಒಳಿತಿಗಾಗಿ ಕ್ವಾಡ್ ಒಕ್ಕೂಟ ಶ್ರಮಿಸುತ್ತದೆ: ಪ್ರಧಾನಿ ಮೋದಿ