ನ್ಯೂಯಾರ್ಕ್(ಅಮೆರಿಕ): ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ನಿಂದ ನಿನ್ನೆ ಸಂಜೆ ನ್ಯೂಯಾರ್ಕ್‌ಗೆ ಬಂದಿಳಿದಿದ್ದಾರೆ. ಇದಕ್ಕೂ ಮುನ್ನ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು.
ಧನ್ಯವಾದಗಳು, ವಾಷಿಂಗ್ಟನ್! ಐತಿಹಾಸಿಕ ಕ್ವಾಡ್ ನಾಯಕರ ಶೃಂಗಸಭೆ ಮತ್ತು ಅಮೆರಿಕ, ಆಸ್ಟ್ರೇಲಿಯಾ ಮತ್ತು ಜಪಾನ್ ಜೊತೆಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್‌ಗೆ ತೆರಳುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ -19 ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ಬುಧವಾರ ದೇಶಕ್ಕೆ ಮೂರು ದಿನಗಳ ಭೇಟಿಗಾಗಿ ಅಮೆರಿಕಾಗೆ ಆಗಮಿಸಿದ್ದರು. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್, ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರನ್ನೂ ಭೇಟಿಯಾಗಿ ಚರ್ಚಿಸಿದ್ದರು. ಕೋವಿಡ್ -19 ರ ನಂತರದ ಮೊದಲ ಕ್ವಾಡ್ ಮೀಟಿಂಗ್‌ನಲ್ಲಿ ಭಾಗವಹಿಸಿದ್ದ ಪ್ರಧಾನಿ, ಭಾರತದಲ್ಲಿ ಹೂಡಿಕೆ ಸಂಬಂಧ ಜಾಗತಿಕ ಐದು ಕಂಪನಿಗಳ ಸಿಇಒಗಳೊಂದಿಗೂ ಗುರುವಾರ ಸಭೆ ನಡೆಸಿದರು.
ಸಾಮಾನ್ಯ ಸಭೆಯಲ್ಲಿ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿಂದು ಮಾತನಾಡಲಿರುವ ಪ್ರಧಾನಿ ಮೋದಿ, ಸಾಂಕ್ರಾಮಿಕ ಕೋವಿಡ್ -19, ಭಯೋತ್ಪಾದನೆ ಎದುರಿಸುವ ಅಗತ್ಯತೆ, ಹವಾಮಾನ ಬದಲಾವಣೆ ಹಾಗೂ ಇತರ ಪ್ರಮುಖ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ.
ಕೋವಿಡ್ -19 ನಿಂದ ಚೇತರಿಸಿಕೊಳ್ಳುವ ಭರವಸೆಯ ಮೂಲಕ ಸ್ಥಿತಿಸ್ಥಾಪಕತ್ವ ಬೆಳೆಸುವುದು, ಸಮರ್ಥವಾಗಿ ಪುನರ್ ನಿರ್ಮಾಣ ಮಾಡುವುದು, ಭೂಮಿಯ ಅಗತ್ಯಗಳಿಗೆ ಸ್ಪಂದಿಸುವುದು, ಜನರ ಹಕ್ಕುಗಳನ್ನು ಗೌರವಿಸುವುದು ಮತ್ತು ವಿಶ್ವಸಂಸ್ಥೆ ಪುನರುಜ್ಜೀವನಗೊಳಿಸುವುದು ವಿಶ್ವಸಂಸ್ಥೆಯ ಈ ವರ್ಷದ ಸಾಮಾನ್ಯ ಚರ್ಚೆಯ ವಿಷಯಗಳಾಗಿವೆ.
ಇದನ್ನೂ ಓದಿ: ಜಮ್ಮು - ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್‌ಗೆ ಭಾರತ ತಿರುಗೇಟು