ಪಿಸ್ಕೋ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೆರುವಿನ ಇಚಾ ನಗರದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತಿದ್ದ ಕೃಷಿ ಕಾರ್ಮಿಕರನ್ನು ಪೊಲೀಸರು ತೆರವುಗೊಳಿಸಲು ಮುಂದಾಗಿದ್ದು, ಈ ವೇಳೆ, ಘರ್ಷಣೆ ನಡೆದು ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ.
ಕಾರ್ಮಿಕರ ಪ್ರತಿಭಟನೆಯಿಂದ ಪಿಸ್ಕೋ, ವಿರು ಮತ್ತು ರಾಜಧಾನಿ ಲಿಮಾದ ಉತ್ತರದಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಕಿಲೋ ಮೀಟರ್ ಗಟ್ಟಲೆ ಟ್ರಕ್, ಬಸ್ ಸೇರಿದಂತೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರತಿಭಟನಾಕಾರ ಗುಂಪು ಕೆಲವೊಂದು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿವೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೃಷಿ ಕಾರ್ಮಿಕರ ಪೈಕಿ ಹೆಚ್ಚಿನವರು ಪಿಸ್ಕೋ ಮತ್ತು ವೈನ್ ತಯಾರಿಸುವ ದ್ರಾಕ್ಷಿ ತೋಟಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಸರಿಯಾದ ವೇತನ ಮತ್ತು ರಜೆ ನೀಡದೇ ಮಧ್ಯವರ್ತಿಗಳು ದಿನಗೂಲಿ ಕಾರ್ಮಿಕರಾಗಿ ದುಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ವೇತನ ಹೆಚ್ಚಳ ಮತ್ತು ಸರಿಯಾದ ರಜೆ ನೀಡುವಂತೆ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ, ದಿನಕ್ಕೆ 12 ರಿಂದ 14 ಗಂಟೆ ಕೆಲಸ ಮಾಡುವ ಓರ್ವ ಕಾರ್ಮಿಕನ ಕೂಲಿ 10 ಯುಎಸ್ ಡಾಲರ್ ಇದೆ. ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಅಧ್ಯಕ್ಷ ಫ್ರಾನ್ಸಿಸ್ಕೊ ಸಾಗಸ್ತಿ ಈ ವಿಷಯದ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ