ವಾಷಿಂಗ್ಟನ್ (ಯುಎಸ್): ಪಾಕಿಸ್ತಾನದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾ ಕಾರ್ಯಾಚರಣೆಯ ಕಮಾಂಡರ್ ಜಾಕಿ-ಉರ್-ರೆಹಮಾನ್ ಲಖ್ವಿಯನ್ನು ಹಣಕಾಸು ಸಂಬಂಧ ಪ್ರಕರಣವೊಂದರಲ್ಲಿ ಶಿಕ್ಷೆಗೊಳಪಡಿಸಿರುವುದು ಸ್ವಾಗತಾರ್ಹ ಎಂದು ಯುಎಸ್ ಶನಿವಾರ ಹೇಳಿದೆ. ಆದರೆ 2008 ರ ಮುಂಬೈ ಹತ್ಯಾಕಾಂಡ ಸೇರಿ, ಹಲವು ಭಯೋತ್ಪಾದಕ ದಾಳಿಗಳಿಗೆ ಸಂಬಂಧಿಸಿದಂತೆ ಆತನನ್ನು ಇನ್ನಷ್ಟು ಹೊಣೆಗಾರನನ್ನಾಗಿ ಮಾಡಬೇಕೆಂದು ಹೇಳಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಖ್ವಿಗೆ ಭಯೋತ್ಪಾದನೆಯಲ್ಲಿ ಭಾಗಿ ಹಾಗೂ ಹಣಕಾಸು ಪ್ರಕರಣವೊಂದಕ್ಕೆ ಸಂಬಂಧಿಸಿ ಪಾಕಿಸ್ತಾನ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ಶುಕ್ರವಾರ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇನ್ನು ದೇಶದಲ್ಲಿ ಮುಕ್ತವಾಗಿ ತಿರುಗಾಡುತ್ತಿರುವ ಭಯೋತ್ಪಾದಕರನ್ನು ನ್ಯಾಯಾಂಗಕ್ಕೆ ಕರೆತರುವಂತೆ ಇಸ್ಲಾಮಾಬಾದ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಲಾಗುತ್ತಿದೆ.
ಭಯೋತ್ಪಾದನಾ ವಿರೋಧಿ ನ್ಯಾಯಾಲಯ (ಎಟಿಸಿ) ಲಾಹೋರ್ನ ನ್ಯಾಯಾಧೀಶ ಎಜಾಜ್ ಅಹ್ಮದ್ ಬುಟ್ಟರ್, ಯುಎನ್ ನಿಷೇಧಿತ ಭಯೋತ್ಪಾದಕ ಲಖ್ವಿಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ, 1,00,000 (ಅಂದಾಜು 620 ಡಾಲರ್) ದಂಡ ವಿಧಿಸಿ ಆದೇಶಿಸಿದೆ.
ನ್ಯಾಯಾಲಯದ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನ ದಕ್ಷಿಣ ಮತ್ತು ಮಧ್ಯ ಏಷ್ಯಾ ಬ್ಯೂರೋ ಟ್ವೀಟ್ ಮಾಡಿ, ಜಾಕಿ-ಉರ್-ರೆಹಮಾನ್ ಲಖ್ವಿಗೆ ವಿಧಿಸಿದ ಶಿಕ್ಷೆ ಹಾಗೂ ಈ ತೀರ್ಪಿನ ಬಗ್ಗೆ ನಮ್ಮ ಪ್ರೋತ್ಸಾಹವಿದೆ ಎಂದಿದೆ.
ಮುಂಬೈ ದಾಳಿ ಪ್ರಕರಣದಲ್ಲಿ 2015 ರಿಂದ ಜಾಮೀನಿನಲ್ಲಿದ್ದ ಲಖ್ವಿಯನ್ನು ಕಳೆದ ಶನಿವಾರ ಪಂಜಾಬ್ ಪ್ರಾಂತ್ಯದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬಂಧಿಸಿತ್ತು.