ನವದೆಹಲಿ: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುವಲ್ಲಿ ನೆರೆಯ ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ. ತಾಲಿಬಾನಿಗಳ ವಿಜಯವನ್ನು ಪಾಕ್ ಸಂಭ್ರಮಿಸಿರುವುದು ಅಸಹ್ಯಕರ ಎಂದು ಅಮೆರಿಕದ ರಿಪಬ್ಲಿಕನ್ ಪಕ್ಷದ ಜನಪ್ರತಿನಿಧಿ ಸ್ಟೀವ್ ಚಬೊಟ್ ಹೇಳಿದ್ದಾರೆ.
ವರ್ಚುವಲ್ ಸಭೆಯೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿದ್ದ ಸಿಖ್ಖರು ಮತ್ತು ಹಿಂದೂಗಳಿಗೆ ಭಾರತ ಆಶ್ರಯ ನೀಡಿರುವುದನ್ನು ಶ್ಲಾಘಿಸಿದರು. ಪಾಕಿಸ್ತಾನದಲ್ಲಿ ಹಿಂದೂಗಳು, ಸಿಖ್ಖರು ಮತ್ತು ಕ್ರಿಶ್ಚಿಯನ್ನರ ಮೇಲಿನ ದಾಳಿಯ ವಿಷಯವು ಅಮೆರಿಕದ ಜನರ ಗಮನಕ್ಕೆ ಬರುವುದಿಲ್ಲ. ಈ ಬಗ್ಗೆ ಅಮೆರಿಕದ ಜನರಿಗೆ ಅರಿವು ಮೂಡಿಸುವ ಅವಶ್ಯಕತೆ ಇದೆ.
ಮುಖ್ಯವಾಗಿ ಹಿಂಸೆ, ಅಪಹರಣ, ಬಲವಂತವಾಗಿ ಇಸ್ಲಾಂಗೆ ಮತಾಂತರ, ಹಿಂದೂ ಯುವತಿಯರನ್ನು ಬಲವಂತವಾಗಿ ಮುಸ್ಲಿಂ ಪುರುಷರಿಗೆ ಮದುವೆ ಮಾಡುವಂತಹ ಇಂತಹ ಹೀನ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು ವರದಿ ಪ್ರಸಾರ ಮಾಡಿವೆ. ಇವುಗಳನ್ನು ನಿರ್ಲಕ್ಷಿಸುತ್ತಿರುವುದು ನೋವಿನ ಸಂಗತಿ ಎಂದರು.
ಇದನ್ನೂ ಓದಿ: ಅಫ್ಘಾನಿಸ್ತಾನದಿಂದ ಇಲ್ಲಿಯವರೆಗೆ ಸ್ಥಳಾಂತರ ಆದವರೆಷ್ಟು? ಭಾರತಕ್ಕೆ ಬಂದವರೆಷ್ಟು?
ಅಮೆರಿಕದಲ್ಲಿ 60 ಲಕ್ಷ ಹಿಂದುಗಳಿದ್ದು, ಅವರೆಲ್ಲಾ ಅಮೆರಿಕದ ಭಾಗವಾಗಿದ್ದಾರೆ. ಕೆಲಸ ಮತ್ತು ಉನ್ನತ ಶಿಕ್ಷಣದ ಬದ್ಧತೆಯ ಮೂಲಕ ಅಮೆರಿಕದ ಕನಸು ನನಸಾಗಿಸುತ್ತಿದ್ದಾರೆ. ದೇಶದಲ್ಲಿ ಹಿಂದೂಗಳು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಮತ್ತು ಅವರ ವಿರುದ್ಧ ತಾರತಮ್ಯದ ಘಟನೆಗಳು ಬೆಳಕಿಗೆ ಬರುತ್ತಿವೆ. ಇಂತಹ ತಾರತಮ್ಯಕ್ಕೆ ಅಮೆರಿಕದಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಚಬೊಟ್ ಎಚ್ಚರಿಕೆ ನೀಡಿದರು.