ವಾಷಿಂಗ್ಟನ್ : ಯುಎಸ್ನಲ್ಲಿ ಕೋವಿಡ್ ಸಂಬಂಧಿತ ಶೇ. 99.2 ರಷ್ಟು ಸಾವುಗಳು ಲಸಿಕೆ ಪಡೆದಿದ್ದರಿಂದ ತಪ್ಪಿವೆ ಎಂದು ದೇಶದ ಉನ್ನತ ಸಾಂಕ್ರಾಮಿಕ ರೋಗ ತಜ್ಞ ಡಾ. ಆಂಥೋನಿ ಫೌಸಿ ಹೇಳಿದ್ದಾರೆ. ಎನ್‌ಬಿಸಿಯ "ಮೀಟ್ ದಿ ಪ್ರೆಸ್" ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದರು.
ಕೋವಿಡ್ ಲಸಿಕೆ ಬೇರೆ ಬೇರೆ ಜನರಲ್ಲಿ ವಿವಿಧ ರೀತಿಗಳಲ್ಲಿ ಪರಿಣಾಮ ಬೀರಬಹುದು. ಲಸಿಕೆ ಪಡೆದ ಕೆಲವರು ಈಗಲೂ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಮೃತಪಡುತ್ತಿದ್ದಾರೆ. ಆದರೂ, ಹೆಚ್ಚಿನ ಜನರು ಲಸಿಕೆ ಪಡೆಯದೆ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಫೌಸಿ ತಿಳಿಸಿದ್ದಾರೆ.
ನಾವು ಕೋವಿಡ್ ಸಾವಿನ ಸಂಖ್ಯೆಯನ್ನು ನೋಡಿದರೆ, ಬಹುತೇಕ ಜನರು ಲಸಿಕೆ ಪಡೆಯದವರು ಮೃತಪಟ್ಟಿದ್ದಾರೆ. ಕೇವಲ 0.8 ಶೇ. ಜನರು ಮಾತ್ರ ಲಸಿಕೆ ಪಡೆದವರು ಮೃತಪಟ್ಟಿದ್ದಾರೆ.
ಓದಿ : COVID ವಿರುದ್ಧ ಮತ್ತೊಂದು ಅಸ್ತ್ರ: ಶೀಘ್ರವೇ ಭಾರತಕ್ಕೆ ಮಾಡರ್ನಾ ಲಸಿಕೆ!
ಯಾವುದೇ ಲಸಿಕೆ ಪರಿಪೂರ್ಣವಾದುದಲ್ಲ. ಆದರೆ, ಕೋವಿಡ್ ಸಾವುಗಳನ್ನು ತಡೆಗಟ್ಟುವ ವಿಷಯಕ್ಕೆ ಬಂದರೆ, ಇಲ್ಲಿ ಕೆಲವರು ಲಸಿಕೆ ಪಡೆದಿದ್ದರೆ ಬದುಕುಳಿಯುತ್ತಿದ್ದರು ಎಂಬುದು ಗೊತ್ತಾಗುತ್ತದೆ. ಲಸಿಕೆ ಪಡೆಯದ ಕಾರಣ ಜನ ಮೃತಪಟ್ಟಿರುವುದು ವಿಷಾದದ ಸಂಗತಿ ಎಂದು ಫೌಸಿ ಹೇಳಿದ್ದಾರೆ.
ಯುಎಸ್ ಅತೀ ಹೆಚ್ಚು ಕೋವಿಡ್ ಬಾಧಿತ ರಾಷ್ಟ್ರಗಳಲ್ಲಿ ಒಂದಾಗಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಮಾಹಿತಿ ಪ್ರಕಾರ ದೇಶದಲ್ಲಿ ಇದುವರೆಗೆ 3,37,16,933 ಜನರಿಗೆ ಸೋಂಕು ತಗುಲಿದೆ. ಈ ಪೈಕಿ 6,05,526 ಮಂದಿ ಮೃತಪಟ್ಟಿದ್ದಾರೆ.