ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಟ್ರಂಪ್ ಆಡಳಿತದ ಬಗ್ಗೆ ತಮ್ಮ ಆಪ್ತರಲ್ಲಷ್ಟೇ ಮಾತನಾಡಿರುವ ಬಗ್ಗೆ ಆಡಿಯೋ ಒಂದು ಲೀಕ್ ಆಗಿದೆ. ಈ ಬಳಿಕ ಅಧಿಕಾರದ ಆಸೆಗಾಗಿ ಅಮೆರಿಕದ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಜಾರ್ಜಿಯಾ ಚುನಾವಣೆಯನ್ನುದ್ದೇಶಿಸಿ ಒಬಾಮ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಒಬಾಮ, ನಾಳೆ ಜಾರ್ಜಿಯಾದಲ್ಲಿ ಚುನಾವಣೆ ನಡೆಯಲಿದೆ. ಮತದಾನದ ಹಕ್ಕನ್ನು ಯಾರಿಂದಲೂ ಕಸಿಯಲು ಸಾಧ್ಯವಿಲ್ಲ. ಕೆಲವರು ಅಧಿಕಾರವನ್ನು ಉಳಿಸಿಕೊಳ್ಳಲು ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿರುವುದು ಗೋಚರಿಸುತ್ತಿದೆ.
ಆದರೆ, ನಮ್ಮ ಪ್ರಜಾಪ್ರಭುತ್ವವು ಯಾವುದೇ ವ್ಯಕ್ತಿಗತವಾಗಿಲ್ಲ, ಇದಕ್ಕೆ ಅಧ್ಯಕ್ಷರೂ ಸಹ ಹೊರತಾಗಿಲ್ಲ ಎಂದು ಯಾರ ಹೆಸರನ್ನೂ ಸಹ ಉಲ್ಲೇಖಿಸದೆ ಟ್ವೀಟ್ನಲ್ಲಿ ನುಡಿದಿದ್ದಾರೆ. ಜಾರ್ಜಿಯಾದಲ್ಲಿ ನಡೆಯಲಿರುವ ಚುನಾವಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಒಬಾಮ, ಈಗಾಗಲೇ ಅಮೆರಿಕದಲ್ಲಿ ನಡೆದಿರುವ ಚುನಾವಣೆಯಲ್ಲಿ ಜೋ-ಬಿಡೆನ್ ವಿಜೇತರಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸಿದ್ರೂ ಸಹ ಇದನ್ನು ಟ್ರಂಪ್ ಒಪ್ಪಿಕೊಳ್ಳುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರ್ಜಿಯಾದ ಉನ್ನತ ಚುನಾವಣಾ ಅಧಿಕಾರಿಯೊಂದಿಗೆ ಮಾತುಕತೆ ನಡೆಸಿದ್ದು, ನಿಯೋಜಿತ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ ಅವರನ್ನು ಹಿಮ್ಮೆಟ್ಟಿಸಲು ತಮ್ಮ ಪರವಾಗಿರುವ 11,000 ಮತಗಳನ್ನು ಹೊಂದಿಸುವಂತೆ ಹೇಳುವುದರ ಮೂಲಕ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಇದು ನಮ್ಮ ದೇಶದ ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ಧಕ್ಕೆಯನ್ನುಂಟು ಮಾಡಿದಂತಾಗುತ್ತಿದೆ ಎಂದು ಒಬಾಮಾ ಹೇಳಿದ್ದಾರೆ.
ಇಂದು ಸೆನೆಟ್ನಲ್ಲಿ(ಸಂಸತ್ನ ಮೇಲ್ಮನೆ) ನಡೆಯಲಿರುವ ಮತದಾನವು ಯಾವ ಪಕ್ಷ ಸೆನೆಟ್ ಮೇಲೆ ನಿಯಂತ್ರಣ ಹೊಂದಿದೆ ಎಂಬುದನ್ನು ನಿರ್ಧರಿಸುತ್ತದೆ. 100 ಸದಸ್ಯರ ಬಲ ಹೊಂದಿರುವ ಸೆನೆಟ್ನಲ್ಲಿ ರಿಪಬ್ಲಿಕನ್ ಪಕ್ಷಕ್ಕೆ 50 ಸ್ಥಾನಗಳು ಮತ್ತು ಡೆಮೋಕ್ರಾಟಿಕ್ ಪಕ್ಷಕ್ಕೆ 48 ಸ್ಥಾನಗಳಿವೆ. ಡೆಮೋಕ್ರಾಟ್‌ಗಳು ಸೆನೆಟ್ನಲ್ಲಿ ಎರಡೂ ಸ್ಥಾನಗಳನ್ನು ಗೆದ್ದರೆ, ಕಮಲಾ ಹ್ಯಾರಿಸ್ ಅವರು ಉಪಾಧ್ಯಕ್ಷರಾಗಿ ಮತ್ತು ಸೆನೆಟ್ ಅಧ್ಯಕ್ಷರಿಗಾಗಿ ತಮ್ಮ ಡೆಮಾಕ್ರಾಟ್‌ಗಳ ಪರವಾಗಿ ಮತ ಚಲಾಯಿಸಬಹುದು ಎಂದು ಇದೇ ವೇಳೆ ಒಬಾಮ ಸ್ಪಷ್ಟಪಡಿಸಿದ್ದಾರೆ.
ಇನ್ನು, ಜಾರ್ಜಿಯಾ ಮತದಾರರಿಗೆ ಸಂದೇಶವೊಂದನ್ನು ರವಾನಿಸಿರುವ ಒಬಾಮ, ನೀವು ಜಾರ್ಜಿಯಾ ಮತದಾರರಾಗಿದ್ದರೆ, ವೋಟ್ ಎಂಬ ಅತ್ಯಂತ ಶಕ್ತಿಶಾಲಿ ಸಾಧನದಿಂದ ನಾಳೆ ನೀವು ಪ್ರತಿಕ್ರಿಯಿಸಬಹುದಾಗಿದೆ. ಮತ ಚಲಾಯಿಸುವ ಮುನ್ನ ಒಮ್ಮೆ ಯೋಚಿಸಿ, ವೈಯಕ್ತಿಕ ನಿರ್ಧಾರ ಕೈಗೊಂಡು ನಿಮ್ಮ ಅಮೂಲ್ಯ ಮತವನ್ನು ಬ್ಯಾಲೆಟ್ ಬಾಕ್ಸ್ನಲ್ಲಿ ಹಾಕಿ ಹಾಗೂ ನಿಮ್ಮ ಸ್ನೇಹಿತರು, ಕುಟುಂಬಸ್ಥರಿಗೂ ಈ ಮಾತನ್ನು ತಿಳಿಸಿ ಎಂದಿದ್ದಾರೆ.