ನ್ಯೂಯಾರ್ಕ್: ಅಮೆರಿಕದ ಪ್ರಮುಖ ನಗರ ನ್ಯೂಯಾರ್ಕ್ನಲ್ಲಿ ಕೊರೊನಾ ಸಾವಿನ ಸಂಖ್ಯೆ 4,000 ಕ್ಕೇರಿದೆ. ಇದು 9/11 ರ ವಿಶ್ವ ವ್ಯಾಪಾರ ಕೇಂದ್ರ (WTC)ದ ಮೇಲಾದ ಭಯೋತ್ಪಾದಕ ದಾಳಿಯಲ್ಲಿ ಕೊಲ್ಲಲ್ಪಟ್ಟವರ ಸಂಖ್ಯೆಯನ್ನೂ ಮೀರಿಸಿದೆ.
ನ್ಯೂಯಾರ್ಕ್ ನಗರದಲ್ಲಿ ಕೋವಿಡ್-19 ಸಾವಿನ ಸಂಖ್ಯೆ WTC ಮೇಲೆ ಸಂಭವಿಸಿದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆಗಿಂತಲೂ ಹೆಚ್ಚಾಗಿದೆ. ಈ ಭಯೋತ್ಪಾದಕ ದಾಳಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ 2,753 ಜನ ಸಾವನ್ನಪ್ಪಿದ್ದರೆ, ಒಟ್ಟಾರೆ 2,977 ಜನರು ಅಸುನೀಗಿದ್ದರು.
ನ್ಯೂಯಾರ್ಕ್ ರಾಜ್ಯದಲ್ಲಿ ನಿನ್ನೆ ಒಂದೇ ದಿನ 731 ಜನ ಸಾವನ್ನಪ್ಪಿದ್ದು, ಇದು ಒಂದು ದಿನದ ಗರಿಷ್ಟ ಸಾವು. ರಾಜ್ಯವ್ಯಾಪಿ ಈವರೆಗೆ 5,500 ಜನ ಸಾವನ್ನಪ್ಪಿದ್ದಾರೆ ಎಂದು ರಾಜ್ಯಪಾಲ ಆಂಡ್ರ್ಯೂ ಕ್ಯುಮೊ ಹೇಳಿದ್ದಾರೆ.
ಒಂದೆಡೆ ನ್ಯೂಯಾರ್ಕ್ನಲ್ಲಿ ಮತ್ತಷ್ಟು ಸೋಂಕಿತ ಪ್ರಕರಣಗಳು ವರದಿಯಾಗುತ್ತಿದ್ದರೆ, ಮತ್ತೊಂದೆಡೆ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕ್ರಮಗಳು ಯಶಸ್ವಿಯಾಗುತ್ತಿರುವ ಸೂಚನೆ ಎಂದು ಕ್ಯುಮೊ ಹೇಳಿದ್ದಾರೆ.
ಅಮೆರಿಕದಲ್ಲಿ ಈವರೆಗೆ ಒಟ್ಟು 12,857 ಮಂದಿ ಸಾವನ್ನಪ್ಪಿದ್ದು, ದೇಶದ ಸೋಂಕಿತರ ಸಂಖ್ಯೆ 4,00,540ಕ್ಕೇರಿದೆ. ಇದರಲ್ಲಿ 21,711 ಮಂದಿ ಗುಣಮುಖರಾಗಿದ್ದಾರೆ.
ನ್ಯೂಯಾರ್ಕ್ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ತೆಗೆದುಕೊಳ್ಳಲಾದ ಕೆಲವು ಕ್ರಮಗಳಿಂದ ಕೊರೊನಾದಿಂದಾದ ಬಿಕ್ಕಟ್ಟು ಸರಿಹೋಗುತ್ತಿದೆ ಎಂದು ತೋರುತ್ತಿದ್ದರೂ, ಆರೋಗ್ಯ ಅಧಿಕಾರಿಗಳು ಪ್ರತಿ ತಿರುವಿನಲ್ಲಿಯೂ ಜನರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.