ನ್ಯೂಯಾರ್ಕ್(ಅಮೆರಿಕ): ಅಮೆರಿಕದ ಪೂರ್ವ ಕರಾವಳಿಗೆ ಅಪ್ಪಳಿಸಿದ ಇಡಾ ಚಂಡಮಾರುತದಿಂದಾಗಿ ನಗರದಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇದರಿಂದಾಗಿ ಕನಿಷ್ಠ 45 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಜೆರ್ಸಿಯಲ್ಲಿ ಕನಿಷ್ಠ 23 ಮಂದಿ ಮೃತಪಟ್ಟಿದ್ದಾರೆಂದು ಡೆಮಾಕ್ರಟಿಕ್ ಗವರ್ನರ್ ಫಿಲ್ ಮರ್ಫಿ ತಿಳಿಸಿದ್ದಾರೆ. ನ್ಯೂಯಾರ್ಕ್ ನಗರದಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, ಈ ಪೈಕಿ, ಅಪಾರ್ಟ್ಮೆಂಟ್ಗಳ ಗೋಡೌನ್ನಲ್ಲಿ ಸಿಲುಕಿ 11 ಜನರು ಮೃತಪಟ್ಟಿದ್ದಾರೆ.
ಪೆನ್ಸಿಲ್ವೇನಿಯಾದಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಭೀಕರ ಗಾಳಿಗೆ ಮರ ಬಿದ್ದು ಓರ್ವ ಮೃತಪಟ್ಟಿದ್ದಾನೆ. ಕಾರಿನಲ್ಲಿ ಚಲಿಸುತ್ತಿದ್ದ ವೇಳೆ ವ್ಯಕ್ತಿ ತನ್ನ ಪತ್ನಿಯನ್ನು ಕಾಪಾಡಿ, ಆತ ಕಾರು ಸಮೇತ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ. ಮೇರಿಲ್ಯಾಂಡ್, ಕನೆಕ್ಟಿಕಟ್ನಲ್ಲಿ ತಲಾ ಒಬ್ಬೊಬ್ಬರು ಮೃತಪಟ್ಟಿದ್ದಾರೆ.
ಅಲ್ಲಿನ ಸ್ಥಳೀಯರು ಮನೆಗಳಿಗೆ ನೀರು ನುಗ್ಗದಂತೆ ತಡೆಯಲು ಯತ್ನಿಸಿದ್ದರೂ, ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಬದುಕುಳಿಯುವುದೇ ದೊಡ್ಡ ಸವಾಲಾಗಿದೆ. ಜನರು ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆ, ಗಾಳಿಗೆ ರಸ್ತೆಗಳು ಹಾಳಾಗಿದ್ದು, ಮರಗಳು ಉರುಳಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆ ಮಂದಗತಿಯಲ್ಲಿ ಸಾಗಿದೆ.
ಇದನ್ನೂ ಓದಿ: ಭೂ ಕುಸಿತಕ್ಕೆ ಆರು ಮಂದಿ ಬಲಿ.. ಇಬ್ಬರು ನಾಪತ್ತೆ
ನ್ಯೂಯಾರ್ಕ್ ನಗರದಲ್ಲಿ ಗುರುವಾರ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಪರೀತ ಗಾಳಿ ಮಳೆಯ ಕಾರಣಕ್ಕೆ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಹಲವಾರು ನಗರಗಳು ಮುಳುಗಡೆಯಾಗಿದ್ದು, ವಾಹನಗಳು ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ಜಲಾವೃತಗೊಂಡಿರುವ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿದೆ.