ಮೆಕ್ಸಿಕೋ ಸಿಟಿ: ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಸಾಫ್ಟ್ವೇರ್ ಕುರಿತ ಚರ್ಚೆ ನಡೆಯುತ್ತಿರುವಾಗಲೇ ಮೆಕ್ಸಿಕೋ ಸರ್ಕಾರ ಈ ಸ್ಪೈವೇರ್ ಖರೀದಿಗೆ 300 ಮಿಲಿಯನ್ ಯುಎಸ್ ಡಾಲರ್ ಹಣ ಖರ್ಚು ಮಾಡಿರುವ ಕುರಿತು ವರದಿಯಾಗಿದೆ. ಇಸ್ರೇಲಿ ಸ್ಪೈವೇರ್ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ನಿಂದ ಸ್ಪೈವೇರ್ ಖರೀದಿಸಲು 2012 ರಿಂದ 2018ರ ವರೆಗಿನ ಆಡಳಿತಾಧಿಕಾರಿಗಳು ಸುಮಾರು 300 ಮಿಲಿಯನ್ ಯುಎಸ್ ಡಾಲರ್ ಸರ್ಕಾರಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಮೆಕ್ಸಿಕೋದ ಅಕ್ರಮ ಹಣ ವರ್ಗಾವಣೆ ವಿರೋಧಿ ಸಂಸ್ಥೆಯ ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೆಗಾಸಸ್ ಸ್ಪೈವೇರ್ನಂತಹ ಪ್ರೋಗ್ರಾಮಿಂಗ್ಗಾಗಿ ಮಾಡಲಾದ ಹೆಚ್ಚುವರಿ ಪಾವತಿಯು ಮಾಜಿ ಸರ್ಕಾರಿ ಅಧಿಕಾರಿಗಳಿಗೆ ಕಿಕ್ಬ್ಯಾಕ್ ಆಗಿ ಹಿಂದಿರುಗಿರಬಹುದು ಎಂದಿದ್ದಾರೆ. ಮೆಕ್ಸಿಕೋದ ಹಣಕಾಸು ಗುಪ್ತಚರ ಘಟಕದ ಮುಖ್ಯಸ್ಥ ಸ್ಯಾಂಟಿಯಾಗೊ ನಿಯೆಟೊ ಹೇಳಿರುವಂತೆ, ಈಗಾಗಲೇ ಅವರು ನೀಡಿರುವ ಹಣದಿಂದ ಟೆಲಿಪೋನ್ ಟ್ಯಾಪಿಂಗ್ನಲ್ಲಿ ಪತ್ರಕರ್ತರು, ವಿರೋಧ ಪಕ್ಷದ ನಾಯಕರು, ಹೋರಾಟಗಾರರ ಟಾರ್ಗೆಟ್ ಮಾಡಿರುವುದು ಪ್ರಶ್ನಾರ್ಹವಾಗಿದೆ. ಜೊತೆಗೆ ಅಧ್ಯಕ್ಷ ಆಂಡರ್ಸ್ ಮ್ಯಾನುಯೆಲ್ ಎಲ್ಪೆಜ್ ಒಬ್ರಡಾರ್ ಮತ್ತು ಅವರ ಆಪ್ತರ ಹೆಸರೂ ಸಹ ಟಾರ್ಗೆಟ್ ಮಾಡಲಾಗಿತ್ತು ಎಂದಿದ್ದಾರೆ.
ಲೋಪೆಜ್ ಒಬ್ರಡಾರ್ ಡಿಸೆಂಬರ್ 1, 2018ರಂದು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದಿದ್ದರು. ಜೊತೆಗೆ ಎಂದಿಗೂ ಸ್ಪೈವೇರ್ ಬಳಸಲಾಗುವುದಿಲ್ಲ ಎಂದು ಘೋಷಿಸಿದ್ದರು. ಪ್ರಸ್ತುತ ಆಡಳಿತದಲ್ಲಿ ಸ್ಪೈವೇರ್ ಜೊತೆ ಯಾವುದೇ ವ್ಯವಹಾರ ಪತ್ತೆಯಾಗಿಲ್ಲ ಎಂದು ನ್ಯಾಟೊ ತಿಳಿಸಿದ್ದಾರೆ. ಆದರೆ ಸ್ಪೈವೇರ್ ಪೆಗಾಸಸ್ ಪಟ್ಟಿಯಲ್ಲಿ ಮೆಕ್ಸಿಕೋದ 700 ಮೊಬೈಲ್ ನಂಬರ್ಗಳು ಕಣ್ಗಾವಲಿನಲ್ಲಿದ್ದವು ಎಂದು ವರದಿಯಾಗಿದೆ.