PNB Fraud Case: ತನಿಖೆಗೆ ಸಹರಿಸಲು ಸಿದ್ಧ ಎಂದ ಮೆಹುಲ್ ಚೋಕ್ಸಿ! - ತನಿಖೆಗೆ ಸಹರಿಸಲು ನಾನು ಸಿದ್ಧ ಎಂದ ಮೆಹುಲ್ ಚೋಕ್ಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂಪಾಯಿ ಪಂಗನಾಮ ಹಾಕಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉದ್ಯಮಿ ಮೆಹುಲ್ ಚೋಕ್ಸಿ, ಇದೀಗ ತನಿಖೆಗೆ ಸಹರಿಸಲು ನಾನು ಸಿದ್ಧ ಎಂದಿದ್ದಾರೆ.
ಸೇಂಟ್ ಜಾನ್ಸ್ / ನವದೆಹಲಿ: ಪಿಎನ್ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಜೆನ್ಸಿಗಳು ನಡೆಸುತ್ತಿರುವ ತನಿಖೆಗೆ ಸಹಕರಿಸಲು ನಾನು ಸಿದ್ಧ ಎಂದು ಉದ್ಯಮಿ ಮೆಹುಲ್ ಚೋಕ್ಸಿ ಹೇಳಿದ್ದಾರೆ. ಅಲ್ಲದೇ, ಭಾರತೀಯ ಏಜೆನ್ಸಿಗಳು ನನ್ನನ್ನು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಿದ್ದಾರೆ.
ಕಳೆದ ಮೂರು ದಿನಗಳಿಂದಷ್ಟೇ ಚೋಕ್ಸಿ ಆರೋಗ್ಯ ಹದಗೆಟ್ಟಿದ್ದರಿಂದ ಡೊಮೆನಿಕಾ ಹೈಕೋರ್ಟ್ ಜಾಮೀನು ನೀಡಿತ್ತು. ಈ ಹಿನ್ನೆಲೆ ಅವರು ಆಂಟಿಗುವಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅನಾರೋಗ್ಯದಿಂದಿರುವ ನಾನು ಭಾರತಕ್ಕೆ ಮರಳಿದರೆ, ನನ್ನ ರಕ್ಷಣೆ ಸಿಗುತ್ತದೆಯೇ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಏಜೆನ್ಸಿಗಳು ನನ್ನೆಲ್ಲಾ ಆಸ್ತಿಯನ್ನು ವಶಪಡಿಸಿಕೊಂಡ ನಂತರ ನನ್ನಲ್ಲಿ ಏನೂ ಉಳಿದಿಲ್ಲ. ನನ್ನ ಮೈಮೇಲಿನ ಚರ್ಮವೊಂದನ್ನು ಬಿಟ್ಟು. ಈ ನಡುವೆಯೂ ಏಜೆನ್ಸಿಗಳು ನನ್ನನ್ನು ಕಿಡ್ನಾಪ್ ಮಾಡಲು ಯತ್ನಿಸಿವೆ ಎಂದು ಅವರು ಆರೋಪಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13,500 ಕೋಟಿ ರೂ ವಂಚನೆ ಮಾಡಿದ ಪ್ರಕರಣದಲ್ಲಿ 62 ವರ್ಷದ ಚೋಕ್ಸಿ, ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದಾನೆ. ಆರೋಗ್ಯ ಸಮಸ್ಯೆಗಳಿರುವುದರಿಂದ ತನಿಖಾಧಿಕಾರಿಗಳೇ ಇಲ್ಲಿಗೆ ಬಂದು ವಿಚಾರಣೆ ನಡೆಸುವಂತೆ ಹೇಳಿದ್ದೇನೆ. ಇನ್ಮುಂದೆ ನನ್ನಿಂದ ಎಲ್ಲಿಗೂ ಪ್ರಯಾಣಿಸಲು ಸಾಧ್ಯವಿಲ್ಲ. ಆದರೂ, ತನಿಖಾ ಸಂಸ್ಥೆಗಳು ನಡೆಸುವ ವಿಚಾರಣೆಗೆ ನಾನು ಸಹಕರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಚೋಕ್ಸಿಗೆ ಜಾಮೀನು ಮಂಜೂರು: ಚಿಕಿತ್ಸೆಗಾಗಿ ಆಂಟಿಗುವಾಗೆ ತೆರಳಿದ ಆರೋಪಿ!
ನಾನು ಭಾರತಕ್ಕೆ ಮರಳಿ ತಪ್ಪಿತಸ್ಥನಲ್ಲ ಎಂದು ಸಾಬೀತು ಪಡಿಸಲು ಪ್ರಯತ್ನಿಸಿದ್ದೆ. ಆದರೆ, ಕಳೆದ 50 ದಿನಗಳಿಂದ ದೈಹಿಕ ಮತ್ತು ಮಾನಸಿಕವಾಗಿ ನನ್ನ ಸ್ಥಿತಿ ಹದಗೆಟ್ಟಿದೆ ಎಂದರು.