ವಾಷಿಂಗ್ಟನ್: ತಾಲಿಬಾನ್‌ಗಳ ಪೈಶಾಚಿಕ ಕೃತ್ಯಗಳಿಂದ ಬೆಚ್ಚಿರುವ ಸಾವಿರಾರು ಮಂದಿ ಅಫ್ಘಾನಿಸ್ತಾನದಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಮೆರಿಕ ಸೇನೆ ತಮ್ಮನ್ನು ರಕ್ಷಿಸಲಿದೆ ಎಂದು ಅದೆಷ್ಟೋ ಜನರು ಆಸೆಗಣ್ಣಿನಿಂದ ಕಾಯುತ್ತಿದ್ದಾರೆ. ಯುಎಸ್ ಸೇನೆ ಹೆಲಿಕಾಪ್ಟರ್‌ಗಳ ಕಾರ್ಯಾಚರಣೆ ಮೂಲಕ ದುರ್ಗಮ ಪ್ರದೇಶದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡುತ್ತಿದೆ.
ಇದೇ ವಿಚಾರವಾಗಿ ಶುಕ್ರವಾರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಫ್ಘನ್‌ನಲ್ಲಿರುವ ಅಮೆರಿಕನ್ನರಿಗೆ ಯಾವುದೇ ರೀತಿಯ ಜೀವಹಾನಿಯಾಗದೆ ಸುರಕ್ಷಿತವಾಗಿ ಸ್ವದೇಶಕ್ಕೆ ಏರ್‌ಲಿಫ್ಟ್ ಮಾಡಿರುವುದು ಅತ್ಯಂತ ಕಷ್ಟಕರ ಹಾಗೂ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ಆಗಿದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ವೈಟ್‌ಹೌಸ್‌ನ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ಬೈಡನ್, ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಅಮೆರಿಕನ್ನರು ಹಾಗೂ ನಮ್ಮ ಪಾಲುದಾರ ದೇಶದ ಜನರನ್ನು ಮನೆಗೆ ಕರೆತರುವ ಜವಾಬ್ದಾರಿ ನಮ್ಮದು. ಈ ಕೆಲಸವನ್ನು ಮಾಡೇ ತೀರುತ್ತೇವೆ ಎಂದು ಪ್ರತಿಜ್ಞೆ ಕೈಗೊಂಡಿದ್ದಾರೆ. ಯುಎಸ್ ವಿಧಿಸಿರುವ ಆಗಸ್ಟ್ 31 ರ ಗಡುವಿನೊಳಗೆ ಕಾಬೂಲ್‌ನಿಂದ ಸಾಧ್ಯವಾದಷ್ಟು ಜನರನ್ನು ಏರ್‌ಲಿಫ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಬೂಲ್‌ನಲ್ಲಿ ಅಮೆರಿಕ ಸೇನೆಗೆ ತೊಂದರೆ ಕೊಟ್ರೆ ಪರಿಣಾಮ ನೆಟ್ಟಗಿರಲ್ಲ: ತಾಲಿಬಾನ್‌ಗೆ Biden ಎಚ್ಚರಿಕೆ
ಜುಲೈನಿಂದ ಈವರೆಗೆ 18,000 ಕ್ಕಿಂತ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಏರ್‌ಲಿಫ್ಟ್ ಆರಂಭವಾದಾಗಿನಿಂದ ಸುಮಾರು 13,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದ ಬೈಡನ್, ಅಫ್ಘಾನಿಸ್ತಾನದಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು. ಕಳೆದ ಸೋಮವಾರ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಉಂಟಾದ ಅವ್ಯವಸ್ಥೆಯಿಂದ ಯುಎಸ್ ತನ್ನ ಜನರ ರಕ್ಷಣಾ ಕಾರ್ಯಾಚರಣೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ ಎಂದು ಹೇಳಿದರು.
ಜೋ ಬೈಡನ್ ಅಫ್ಘಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ಹಿಂಪಡೆಯುವ ನಿರ್ಧಾರವನ್ನು ಕೈಗೊಂಡ ಬಳಿಕ ಆಫ್ಘನ್‌ಅನ್ನು ತಾಲಿಬಾನ್‌ಗಳು ಸ್ವಾಧೀನಪಡಿಸಿಕೊಂಡಿದ್ದರು. ಅಮೆರಿಕ ಅಧ್ಯಕ್ಷರ ನಡೆಗೆ ಕೆಲವೆಡೆ ಟೀಕೆಗಳು ವ್ಯಕ್ತವಾಗಿವೆ. ಆದರೂ ಬೈಡನ್ ಪದೇ ಪದೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.