ನ್ಯೂಯಾರ್ಕ್(ಅಮೆರಿಕ): ಅಹಿಂಸೆ ಹೇಡಿತನವಲ್ಲ ಎಂದು ಮಹಾತ್ಮ ಗಾಂಧೀಜಿಯವರು ನಮಗೆ ಕಲಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನದ ಅಧ್ಯಕ್ಷ ಅಬ್ದುಲ್ಲಾ ಶಾಹೀದ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತೀಯರು ಆಯೋಜಿಸಿದ್ದ ಮಹಾತ್ಮ ಗಾಂಧಿಯವರ 152 ನೇ ಜನ್ಮ ದಿನಾಚರಣೆಯ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಮಾಲ್ಡೀವ್ಸ್‌ನ ಅಬ್ದುಲ್ಲಾ ಶಾಹೀದ್, 'ಅಹಿಂಸೆಯ ಮಹತ್ವವನ್ನು ಹೇಳಿಕೊಟ್ಟ ಮನುಷ್ಯನ ಅದ್ಭುತ ಪರಂಪರೆಯನ್ನು ನಾವು ಆಚರಿಸುತ್ತಿದ್ದೇವೆ' ಎಂದರು.
'ಮಹಾತ್ಮ ಗಾಂಧೀಜಿಯವರು ಅಹಿಂಸೆಯನ್ನು ಒಂದು ಶಕ್ತಿಯೆಂದು ನಂಬುತ್ತಾರೆ ಮತ್ತು ಅವರು ಎಲ್ಲಾ ಮಾನವಕುಲದ ಮೇಲೆ ಸಮಾನ ಪ್ರೀತಿಯ ಮೇಲೆ ನಂಬಿಕೆ ಹೊಂದಿದ್ದರು. ಅನ್ಯಾಯವನ್ನು ಎದುರಿಸಲು ಶಾಂತಿ ಮಾರ್ಗವನ್ನು ಆರಿಸಿಕೊಂಡರು' ಎಂದು ಅಬ್ದುಲ್ಲಾ ಶಾಹೀದ್ ಹೇಳಿದ್ದಾರೆ.
'ಗಾಂಧಿಯವರ ಜನ್ಮದಿನವನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಾಗತಿಕ ಸಂಸ್ಥೆಗಳು ಸೇರಿದಂತೆ ವಿವಿಧ ವಿಶ್ವ ನಾಯಕರು ಗಾಂಧೀಜಿ ಅವರ ಅಹಿಂಸೆ ಮತ್ತು ಸಹಿಷ್ಣುತೆಯ ಸಂದೇಶವನ್ನು ಸ್ಮರಿಸುತ್ತಾರೆ' ಎಂದು ಅಬ್ದುಲ್ಲಾ ಹೇಳಿದ್ದಾರೆ.
ಇನ್ನು ಶುಕ್ರವಾರ ಮಾತನಾಡಿದ್ದ ಅಬ್ದುಲ್ಲಾ ಶಾಹೀದ್, ಭಾರತ ಕೊರೊನಾ ನಿರ್ಮೂಲನೆ ಮಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ರಾಷ್ಟ್ರವಾಗಿದೆ ಎಂದಿದ್ದು ಲಸಿಕೆ ಉತ್ಪಾದನೆ ಕುರಿತಂತೆ ಶ್ಲಾಘನೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಭವಾನಿಪುರ ಬೈ ಎಲೆಕ್ಷನ್ನಲ್ಲಿ ದೀದಿ ಮುನ್ನಡೆ: TMC ಕಾರ್ಯಕರ್ತರ ಸಂಭ್ರಮಾಚರಣೆ