ಮನಾಗುವಾ(ನಿಕರಾಗುವಾ): ಉತ್ತರ ಅಮೆರಿಕದ ದಕ್ಷಿಣದಲ್ಲಿರುವ ನಿಕರಾಗುವಾ ರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ ಎಂದು ಯೂರೋಪಿಯನ್-ಮೆಡಿಟರೇನಿಯನ್ ಸಿಸ್ಮೋಲಜಿಕಲ್ ಸೆಂಟರ್ ತಿಳಿಸಿದೆ.
ರಿಕ್ಟರ್ ಮಾಪಕದಲ್ಲಿ 6.2ರಷ್ಟು ತೀವ್ರತೆ ದಾಖಲಾಗಿದ್ದು, ಸ್ಥಳೀಯ ಕಾಲಮಾನ ರಾತ್ರಿ 12.25ಕ್ಕೆ (ಜಾಗತಿಕ ಕಾಲಮಾನ ಬೆಳಗ್ಗೆ 6.25) ಭೂಕಂಪನ ಸಂಭವಿಸಿದೆ. ಸುಮಾರು 1,30,000 ಜನಸಂಖ್ಯೆಯಿರುವ ಮಸಾಯ ನಗರದಿಂದ 97 ಕಿಲೋಮೀಟರ್ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿದೆ.
80 ಕಿಲೋಮೀಟರ್ ಆಳದಲ್ಲಿ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಇದುವರೆಗೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಸುನಾಮಿ ಎಚ್ಚರಿಕೆಯನ್ನೂ ಇನ್ನೂ ಸ್ಥಳೀಯ ಪ್ರಾಧಿಕಾರಗಳು ನೀಡಿಲ್ಲ ಎಂದು ತಿಳಿದುಬಂದಿದೆ.
ಕೆಲವೇ ಗಂಟೆಗಳ ಹಿಂದೆ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8ರಷ್ಟು ತೀವ್ರತೆ ದಾಖಲಾಗಿತ್ತು. ಈಗ ಮತ್ತೊಂದು ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಒಂದೇ ಕುಟುಂಬದ ಐವರು ಸಾವು