ಹೈದರಾಬಾದ್: ಕೊರೊನಾ ವೈರಸ್ ಸೋಂಕಿತರಿಂದ ಜಗತ್ತಿನಾದ್ಯಂತ ಮರಣದ ಪ್ರಮಾಣ ಕಡಿಮೆ ಆಗಿದ್ದರೂ ಜನರ ಆರೋಗ್ಯದ ಮೇಲೆ ಅದರ ಪರಿಣಾಮ ಬೀರುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕಳವಳ ವ್ಯಕ್ತಪಡಿಸಿದೆ.
ಪ್ರಪಂಚದಾದ್ಯಂತ ಕೋವಿಡ್ ಸಾಂಕ್ರಾಮಿಕವು ಗಮನಾರ್ಹವಾದ ಪ್ರಾಣ ಹಾನಿ ಉಂಟುಮಾಡಿದೆ. ಆರೋಗ್ಯ ಮತ್ತು ದೇಶದ ಪ್ರಗತಿಯಲ್ಲಿ ತೀವ್ರವಾದ ಸಂಕಷ್ಟ ತಂದಿಟ್ಟಿದೆ ಎಂದು 2020ರ ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳು, ಆರೋಗ್ಯದ ಬಗ್ಗೆ ವಾರ್ಷಿಕ ತಪಾಸಣೆ ಪ್ರಮುಖ ಸೂಚಕಗಳ ಸರಣಿಯಿಂದ ತಿಳಿದುಬಂದಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಮಾತನಾಡಿ, ಒಳ್ಳೆಯ ಸುದ್ದಿ ಎಂದರೆ ವಿಶ್ವದಾದ್ಯಂತ ಜನರು ಹೆಚ್ಚು ಕಾಲ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದಾರೆ. ಕೆಟ್ಟ ಸುದ್ದಿ ಎಂದರೆ ಪ್ರಗತಿಯ ಪ್ರಮಾಣವು ತುಂಬಾ ನಿಧಾನವಾಗಿದೆ ಎಂದರು.
ಕ್ಯಾನ್ಸರ್, ಮಧುಮೇಹ, ಹೃದಯ, ಶ್ವಾಸಕೋಶ, ಪಾರ್ಶ್ವವಾಯು ನಂತಹ ಇತರೆ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಆರೋಗ್ಯ ಸೇವೆಗಳ ಕೊರತೆಯಿದೆ. ಮಧ್ಯಮ ಆದಾಯದ ದೇಶಗಳಲ್ಲಿನ ಸೇವಾ ವ್ಯಾಪ್ತಿಯು ಶ್ರೀಮಂತ ರಾಷ್ಟ್ರಗಳಿಗಿಂತ ಕಡಿಮೆಯಿದೆ ಎಂದು ತಿಳಿಸಿದರು.
ಶೇ 40ಕ್ಕೂ ಅಧಿಕ ದೇಶಗಳಲ್ಲಿ 10,000 ಜನರಿಗೆ 10ಕ್ಕಿಂತ ಕಡಿಮೆ ವೈದ್ಯರಿದ್ದಾರೆ. ಶೇ 55ಕ್ಕಿಂತ ಅಧಿಕ ದೇಶಗಳು 10,000 ಜನರಿಗೆ 40ಕ್ಕಿಂತ ಕಡಿಮೆ ನರ್ಸಿಂಗ್ ಮತ್ತು ದಾದಿಯರ ಸಿಬ್ಬಂದಿ ಹೊಂದಿವೆ. ಕೋವಿಡ್-19 ನಂತಹ ಮಹಾಮಾರಿ ವಿರುದ್ಧ ಹೋರಾಡಲು ದೇಶಗಳು ದೃಢವಾದ ಆರೋಗ್ಯ ವ್ಯವಸ್ಥೆಗಳು ಮತ್ತು ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡುವ ತುರ್ತು ಅಗತ್ಯವಿದೆ ಎಂದು ಟೆಡ್ರೊಸ್ ಹೇಳಿದರು.
ಆರೋಗ್ಯ ತುರ್ತು ಪರಿಸ್ಥಿತಿಗಳಿಂದ ಜನರನ್ನು ರಕ್ಷಿಸುವ ಅಗತ್ಯವನ್ನು ಕೊರೊನಾ ಸಾಂಕ್ರಾಮಿಕ ರೋಗವು ಎತ್ತಿ ತೋರಿಸುತ್ತದೆ ಎಂದು ಡಬ್ಲ್ಯುಎಚ್ಒನ ಸಹಾಯಕ ಮಹಾನಿರ್ದೇಶಕ ಡಾ. ಸಮೀರಾ ಅಸ್ಮಾ ಹೇಳಿದರು.
ಈ ಸವಾಲುಗಳನ್ನು ನಿಭಾಯಿಸುವುದು ಮುಂದಿನ ವಾರದ 73ನೇ ವಿಶ್ವ ಆರೋಗ್ಯ ಸಂಸ್ಥೆಯ ಅಧಿವೇಶನದ ಕಾರ್ಯಸೂಚಿಯಲ್ಲಿದೆ. ಇದನ್ನು ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ ನಡೆಸಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯು ಪ್ರಮುಖವಾಗಿ ಕೊರೊನಾ ಮೇಲೆ ಕೇಂದ್ರೀಕರಿಸುತ್ತದೆ. ಸದಸ್ಯ ರಾಷ್ಟ್ರಗಳು ಮೇ 18 ರಿಂದ 19ರ ವರೆಗೆ ಸಭೆ ಸೇರುತ್ತವೆ ಎಂದರು.