ವಾಷಿಂಗ್ಟನ್(ಅಮೆರಿಕ): ಅಫ್ಘಾನಿಸ್ತಾನ ತನ್ನಲ್ಲಿ ನಡೆಯುತ್ತಿರುವ ಸಂಘರ್ಷದ ಕಾರಣದಿಂದಾಗಿ ಜಗತ್ತಿನ ಗಮನವನ್ನು ಸೆಳೆಯುತ್ತಿದೆ. ಜಿ-7 ರಾಷ್ಟ್ರಗಳು ಈ ವಿಚಾರವಾಗಿ ಚರ್ಚೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದಲ್ಲಿ ಆರಂಭವಾಗುವ ಸರ್ಕಾರ ಆ ದೇಶವನ್ನು ಭಯೋತ್ಪಾದನೆಗೆ ಬಳಸುವುದರ ವಿರುದ್ಧ ಒಗ್ಗಟ್ಟಾಗಿರಬೇಕೆಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಅಫ್ಘಾನಿಸ್ತಾನದಲ್ಲಿ ಮುಂದಿನ ದಿನಗಳಲ್ಲಿ ಬರುವ ಯಾವುದೇ ಸರ್ಕಾರ ಅಫ್ಘಾನಿಸ್ತಾನದಲ್ಲಿ ಅಸ್ತಿತ್ವಕ್ಕೆ ಬಂದರೆ, ಆ ಸರ್ಕಾರವೇನಾದರೂ ಭಯೋತ್ಪಾದನೆಯ ನೆಲೆಯಾದರೆ, ಆ ರಾಷ್ಟ್ರದ ವಿರುದ್ಧ ಸೇನೆಯನ್ನು ಬಳಸಲಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನದ ವಿಚಾರವಾಗಿ ಜಿ-7, ನ್ಯಾಟೋ, ವಿಶ್ವಸಂಸ್ಥೆ ಮುಂತಾದ ಸಮೂಹಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಜೋ ಬೈಡನ್, ಎಲ್ಲರೂ ತಾಲಿಬಾನ್ ವಿರುದ್ಧ ಹೋರಾಡಲು ಅದರ ನಡವಳಿಕೆಯನ್ನು ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಕೆಲವು ದಿನಗಳ ಹಿಂದೆ ಆಫ್ಘನ್ ಜನರಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಕ್ಕೆ ಧಾವಿಸಬೇಕೆಂದು ಮನವಿ ಮಾಡಿದ್ದರು. ಗುಟೆರಸ್ ಅವರ ಹೇಳಿಕೆಯನ್ನು ನಾವು ಬೆಂಬಲಿಸುತ್ತೇವೆ. ಆಫ್ಘನ್ ಜನರ ಸಹಾಯಕ್ಕೆ ಮುಂದಾಗುತ್ತೇವೆ ಎಂದು ಬೈಡನ್ ಸ್ಪಷ್ಟಪಡಿಸಿದ್ದಾರೆ.
ಅಫ್ಘಾನಿಸ್ತಾನದಿಂದ ಪಲಾಯನ ಮಾಡುತ್ತಿರುವವರನ್ನು ಮತ್ತು ಅಲ್ಲಿಂದ ತಮ್ಮ ತಮ್ಮ ರಾಷ್ಟ್ರಗಳಿಗೆ ತೆರಳುತ್ತಿರುವವರನ್ನು ಕುರಿತು ಜಿ-7 ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಈ ಪ್ರಯತ್ನಗಳಲ್ಲಿ ಅಮೆರಿಕ ಸಂಪೂರ್ಣ ನಾಯಕತ್ವ ವಹಿಸುತ್ತದೆ ಎಂದು ಬೈಡನ್ ಭರವಸೆ ನೀಡಿದ್ದಾರೆ.
ಕಳೆದ 20 ವರ್ಷಗಳಲ್ಲಿ ನಾವು ಅಫ್ಘಾನಿಸ್ತಾನದಲ್ಲಿದ್ದ ಭದ್ರತೆ ಕಾಪಾಡಿದಂತೆ ಈಗಲೂ ಕೂಡಾ ಅಲ್ಲಿನ ಸವಾಲುಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ಸ್ನೇಹವಿರುವ ಪ್ರಜಾಪ್ರಭುತ್ವ ರಾಷ್ಟ್ರಗಳ ಜೊತೆಗೂಡಿ ಈ ಕುರಿತು ಮುನ್ನಡೆಯುತ್ತೇವೆ ಎಂದು ಬೈಡನ್ ಹೇಳಿದ್ದಾರೆ.
ಇನ್ನು ಜಿ-7 ವರ್ಚುವಲ್ ಸಭೆಯಲ್ಲಿ ಬೈಡನ್ ಜೊತೆಗೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಾಲಿಯನ್ ಪ್ರಧಾನಿ ಮಾರಿಯೋ ಡ್ರಾಗಿ, ಜಪಾನ್ ಪ್ರಧಾನಿ ಸುಗ ಯೋಶಿಹಿಡೆ, ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ನ್ಯಾಟೋ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಭಾಗವಹಿಸಿದ್ದರು.
ಇದನ್ನೂ ಓದಿ: ಭಾರತದಿಂದ ಬರುವ ಪ್ರಯಾಣಿಕರಿಗೆ 'ಸ್ಥಳದಲ್ಲೇ ವೀಸಾ ಸೌಲಭ್ಯ' ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಯುಎಇ!