ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಡೆಮಾಕ್ರಟಿಕ್ ಪಕ್ಷದಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಎದುರಿಸಲಿರುವ ಕಮಲಾ ಹ್ಯಾರಿಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ‘ರೆಸಿಸ್ಟ್’ ಎಂದು ಜರಿದಿದ್ದಾರೆ.
ಅಲ್ಲದೆ ಟ್ರಂಪ್ ತಮ್ಮ ಹಿಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮರ ನ್ಯಾಯಸಮ್ಮತೆಯನ್ನು ಪ್ರಶ್ನಿಸುತ್ತಾರೆಂದು ಉಲ್ಲೇಖಿಸಿದ್ದಾರೆ. ನ್ಯೂಯಾರ್ಕ್ ಟೈಮ್ಸ್ನ ವರದಿಯಂತೆ, ಯುಸ್ನ ಜಾರ್ಜಿಯಾದಲ್ಲಿರುವ ಮೊರ್ಹೌಸ್ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರಚಾರದಲ್ಲಿ ಕಮಲಾ ಹ್ಯಾರಿಸ್ ಮಾತನಾಡುತ್ತ, ‘ಜನರು ನನ್ನನ್ನು ಕೇಳುತ್ತಾರೆ, ಟ್ರಂಪ್ ಜನಾಂಗೀಯ ದ್ವೇಷಿ ಎಂದು ಭಾವಿಸುತ್ತೀರಾ.? ಅದಕ್ಕೆ ‘ಹೌದು’ ಎಂದು ಕಮಲಾ ಉತ್ತರಿಸಿದ್ದಾರೆ ಎಂದು ವರದಿ ಮಾಡಿದೆ.
ಮಾತು ಮುಂದುವರೆಸಿ ‘ಅಮೆರಿಕಗೆ ವರ್ಣಭೇದ ನೀತಿಯನ್ನು ತಿರಸ್ಕರಿಸಿ, ದೇಶದ ಇತಿಹಾಸವನ್ನು ಅಂಗೀಕರಿಸಿ, ಸತ್ಯವನ್ನು ಮಾತ್ರ ಜನರಿಗೆ ಮುಟ್ಟಿಸಲು ಮೈಕ್ಗಳನ್ನು ಬಳಸಲು ಇಚ್ಛಿಸುವ ಅಧ್ಯಕ್ಷರು ಬೇಕಾಗಿದ್ದಾರೆ’ ಎಂದಿದ್ದಾರೆ.
ವರದಿಗಳ ಪ್ರಕಾರ, ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಬೈಡನ್ ಹಾಲಿ ಅಧ್ಯಕ್ಷ ಟ್ರಂಪ್ ಅವರೊಂದಿಗೆ ಸಮನಾದ ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಈ ವೇಳೆ ಮತದಾರರಿಗೆ ನಾಗರಿಕ ಹಕ್ಕುಗಳ ರಕ್ಷಿಸುವ ನಾಯಕನನ್ನು ಚುನಾಯಿಸಿ ಎಂದು ಹ್ಯಾರಿಸ್ ಮನವಿ ಮಾಡಿದ್ದಾರೆ.