ಸರ್ಫ್‌ಸೈಡ್ (ಫ್ಲೋರಿಡಾ) : ನಗರದಲ್ಲಿ ಕಳೆದ ತಿಂಗಳು ಸಂಭವಿಸಿದ 12 ಅಂತಸ್ತಿನ ಕಟ್ಟಡ ಕುಸಿತ ಘಟನೆಯ ಸಂತ್ರಸ್ತರು ಮತ್ತು ಕುಟುಂಬಗಳಿಗೆ ಆರಂಭದಲ್ಲಿ ಕನಿಷ್ಠ 150 ಮಿಲಿಯನ್ ಡಾಲರ್ ಪರಿಹಾರ ನೀಡಲಾಗುವುದು ಎಂದು ನ್ಯಾಯಾಧೀಶರೊಬ್ಬರು ತಿಳಿಸಿದ್ದಾರೆ.
ಪರಿಹಾರ ಮೊತ್ತವು ಚಾಂಪ್ಲೈನ್ ಟವರ್ನ ಸೌತ್ ಬಿಲ್ಡಿಂಗ್ ಮಾರಾಟದಿಂದ 50 ಮಿಲಿಯನ್ ಯುಎಸ್ ಡಾಲರ್ ಮತ್ತು ಕುಸಿದ ಕಟ್ಟದ ಇದ್ದ ಜಾಗವನ್ನು ಮಾರಾಟ ಮಾಡಿ 100 ಮಿಲಿಯನ್ ಡಾಲರ್ ನೀಡಲಾಗುತ್ತದೆ ಎಂದು ಮಿಯಾಮಿ-ಡೇಡ್ ಸರ್ಕ್ಯೂಟ್ ನ್ಯಾಯಾಧೀಶ ಮೈಕೆಲ್ ಹಂಜ್ಮನ್ ಮಾಹಿತಿ ನೀಡಿದ್ದಾರೆ.
ನ್ಯಾಯಾಲಯದ ಕಾಳಜಿ ಯಾವಾಗಲೂ ಸಂತ್ರಸ್ತರ ಮೇಲಿರುತ್ತದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಸಂತ್ರಸ್ತರಲ್ಲಿ ಕಟ್ಟಡ ಮಾಲೀಕರು ಮಾತ್ರವಲ್ಲದೆ, ಸಂದರ್ಶಕರು ಮತ್ತು ಬಾಡಿಗೆದಾರರು ಸೇರಿದ್ದಾರೆ. ಅವರ ಹಕ್ಕುಗಳನ್ನೂ ರಕ್ಷಿಸಲಾಗುವುದು ಎಂದು ಎಂದಿದ್ದಾರೆ.
ಜೂನ್ 24 ರಂದು ಕಟ್ಟಡ ಕುಸಿತ ಸಂಭವಿಸಿದ ಬಳಿಕ ದಾಖಲಾದ ಮೊಕದ್ದೆಮೆಗಳ ತೀರ್ಪಿನಲ್ಲಿ ಘೋಷಣೆಯಾಗುವ ಯಾವುದೇ ಮೊತ್ತ ಇಲ್ಲಿ ಲೆಕ್ಕಕ್ಕೆ ಬರುವುದಿಲ್ಲ. ಎಲ್ಲಾ ಸಂತ್ರಸ್ತರನ್ನು ಒಳಗೊಂಡು 150 ಮಿಲಿಯನ್ ಡಾಲರ್ ಪರಿಹಾರ ಮೊತ್ತವನ್ನು ಘೋಷಿಸಲಾಗಿದೆ. ಇದರಲ್ಲಿ ಎಲ್ಲಾ ಸಂತ್ರಸ್ತರು ಮತ್ತು ಅವರ ಕುಟುಂಬ ವರ್ಗದವರು ಒಳಗೊಳ್ಳುತ್ತಾರೆ ಎಂದು ನ್ಯಾಯಾಧೀಶ ಹಂಜ್ಮನ್ ಹೇಳಿದ್ದಾರೆ.
ಓದಿ : ಚೀನಾದಲ್ಲಿ ವರುಣಾರ್ಭಟ: ಮೃತರ ಸಂಖ್ಯೆ 25ಕ್ಕೆ ಏರಿಕೆ - ಮುಂದುವರಿದ ರಕ್ಷಣಾ ಕಾರ್ಯಾಚರಣೆ!
ಇದುವರೆಗೆ 95 ಮೃತರನ್ನು ಗುರುತಿಸಲಾಗಿದೆ. ಹಲವರ ಡಿಎನ್ಎ ಪರೀಕ್ಷೆ ನಡೆಯುತ್ತಿದೆ. ಕಾಣೆಯಾದ ಮೂವರು ಸಂಬಂಧಿಕರು ಮತ್ತು ಸ್ನೇಹಿತರು ಅವರ ಬಗ್ಗೆ ಮಾಹಿತಿಗಾಗಿ ಕಾಯುತ್ತಿದ್ದಾರೆ. ಒಟ್ಟಾರೆ ಸಾವಿನ ಸಂಖ್ಯೆ 98 ಆಗುವ ಸಾಧ್ಯತೆಯಿದೆ. ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅಧಿಕಾರಿಗಳು ಇನ್ನೂ ಖಚಿತ ಮಾಹಿತಿ ನೀಡಿಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಫ್ಲೋರಿಡಾದ ನಗರದ ಮಿಯಾಮಿ ಸಮೀಪ ಸಮುದ್ರ ತೀರದಲ್ಲಿದ್ದ ಓಶಿಯನ್ ಫ್ರಂಟ್ ಫ್ಲೋರಿಡಾ ಕಂಡೋಮಿನಿಯಮ್ ಎಂಬ 12 ಅಂತಸ್ತಿತ ಬೃಹತ್ ಕಟ್ಟಡದ ಒಂದು ಭಾಗ (ಗೋಪುರ) ಜೂನ್ 24, 2021 ರಂದು ಕುಸಿದು ಬಿದ್ದಿತ್ತು. ದುರಂತದಲ್ಲಿ 95 ಜನ ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು. ಗಾಯಾಳುಗಳ ಪೈಕಿ ಇನ್ನೂ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ.