ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಮತ್ತು ಶ್ವೇತಭವನದ ಹಿರಿಯ ಸಲಹೆಗಾರ್ತಿಯಾಗಿರುವ ಇವಾಂಕಾ ಟ್ರಂಪ್ ಅವರ ವೈಯಕ್ತಿಕ ಸಹಾಯಕಿಗೂ ಕೊರೊನಾ ದೃಢಪಟ್ಟಿರುವುದಾಗಿ ಅಮೆರಿಕ ಮಾಧ್ಯಮವೊಂದು ವರದಿ ಮಾಡಿದೆ.
ಆದರೆ, ಇವಾಂಕಾ ಅವರ ಸಹಾಯಕಿ ವಾರಗಳಿಗಿಂತಲೂ ಹೆಚ್ಚು ದಿನ ಇವಾಂಕಾರೊಂದಿಗೆ ಇರಲಿಲ್ಲ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಅವರ ವಕ್ತಾರ ಕೇಟೀ ಮಿಲ್ಲರ್ಗೆ ಸೋಂಕು ದೃಢಪಟ್ಟ ದಿನವೇ, ಇವಾಂಕಾ ಅವರ ವೈಯಕ್ತಿಕ ಸಹಾಯಕಿಗೂ ಸೋಂಕು ಇರುವುದು ಖಚಿತವಾಗಿದೆ.
ಸದ್ಯ ಶ್ವೇತಭವನದ ಹಿರಿಯ ಆಡಳಿತ ಅಧಿಕಾರಿಗಳಲ್ಲಿ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಆತಂಕ ಹೆಚ್ಚಾಗಿದೆ. ಹಾಗಾಗಿ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೇಯ್ಲೀ ಮೆಕ್ ಎನಾನಿ ಶುಕ್ರವಾರದ ಲಘು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇವಾಂಕಾ ಮತ್ತು ಅವರ ಪತಿ ಜೇರೆಡ್ ಕುಶ್ನರ್ ಅವರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿವೆ.