ತೆಹ್ರಾನ್(ಇರಾನ್): ಇರಾನ್ ಸೇನೆಯ ಪ್ರಮುಖ ಕಮಾಂಡರ್ ಕಾಸಿಮ್ ಸುಲೇಮಾನಿ ಅವರು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಭಾರಿ ಪ್ರಮಾಣದ ಕಾಲ್ತುಳಿತ ಸಂಭವಿಸಿ ಇದೀಗ ಅಂತ್ಯಕ್ರಿಯೆಯನ್ನು ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಇರಾನಿಗರು ಅಮೆರಿಕದ ವಿರುದ್ಧ ಆಕ್ರೋಶದ ಕೆಂಡವನ್ನೇ ಕಾರಿದ್ದಾರೆ.
ಪಾರ್ಥಿವ ಶರೀರದ ಮೆರವಣಿಗೆ ವೇಳೆ ಲಕ್ಷಾಂತರ ಜನರು ಭಾಗಿ:
ಅಂತ್ಯಕ್ರಿಯೆಗೆ ಮುಂಚಿತವಾಗಿ ನಡೆದ ಮೆರವಣಿಗೆಗೆ ಲಕ್ಷಾಂತರ ಮಂದಿ ಆಗಮಿಸಿದ್ದು, ಸುಲೇಮಾನಿ ಮೇಲಿದ್ದ ಅಭಿಮಾನಕ್ಕೆ ಸಾಕ್ಷಿಯೆಂಬಂತಿತ್ತು. ಈ ವೇಳೆ ಅಮೆರಿಕ ವಿರುದ್ಧ ಇರಾನಿಗರ ಆಕ್ರೋಶದ ಕಟ್ಟೆಯೊಡೆದಿದೆ. ಮೃತ ಸೇನಾ ಕಮಾಂಡರ್ ಸುಲೇಮಾನಿ ಪುತ್ರಿ ಝೀನಾಬ್ ಸುಲೇಮಾನಿ ಈಗಾಗಲೇ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕಕ್ಕೆ ಸವಾಲ್:
ಇಲ್ಲಿನ ಸರ್ಕಾರಿ ಟೆಲಿವಿಷನ್ ಮೂಲಕ ಭಾಷಣ ಮಾಡಿದ ಝೀನಾಬ್, ಅಮೆರಿಕಕ್ಕೆ ಅದರಲ್ಲೂ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಸವಾಲು ಹಾಕಿದ್ದಾರೆ. ‘ಕ್ರೇಜಿ ಟ್ರಂಪ್, ನನ್ನ ತಂದೆಯ ಮರಣ ನಂತರ ಎಲ್ಲವೂ ಮುಗಿದು ಹೋಯಿತು ಎಂದುಕೊಳ್ಳಬೇಡ. ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ತಕ್ಕ ಶಾಸ್ತಿ ಕಾದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತೀಕಾರದ ತಂತ್ರ:
ಸುಲೇಮಾನಿ ಹತ್ಯೆಯ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮುಗಿಲುಮುಟ್ಟಿದೆ. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್ ತಂತ್ರ ಹೆಣೆಯುತ್ತಿದೆ.
ಎರಡು ದೇಶಗಳ ನಡುವೆ ಹಗೆಯ ಹೊಗೆ:
ಇದಕ್ಕೆ ಪೂರಕ ಎಂಬಂತೆ ಹಾಗೂ ಅಮೆರಿಕಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ರೀತಿಯಲ್ಲಿ ಮಸೀದಿಯೊಂದರ ಮೇಲೆ ಕೆಂಪು ಬಾವುಟ ಹಾರಿಸಲಾಗಿದೆ. ಅಮೆರಿಕದ ಮೇಲೆ ದಾಳಿ ನಡೆಸಲು ಸುಮಾರು 35 ತಾಣಗಳನ್ನು ಇರಾನ್ ಗುರುತಿಸಿದೆ ಎಂದು ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ಡೊನಾಲ್ಡ್ ಟ್ರಂಪ್ ಕೂಡ ಇರಾನ್‌ನ 52 ಪ್ರದೇಶಗಳನ್ನು ದಾಳಿಗೆ ಗುರಿಯಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
'ಭಯೋತ್ಪಾದಕ ಅಮೆರಿಕ ಸೇನೆ'
ಇಲ್ಲಿನ ಸಂಸತ್ತಿನಲ್ಲಿ ನಡೆದ ತುರ್ತು ಅಧಿವೇಶನದಲ್ಲಿ ಅಮೆರಿಕ ಮಿಲಿಟರಿ ಪಡೆ ಮತ್ತು ವೈಮಾನಿಕ ದಾಳಿಯಲ್ಲಿ ಭಾಗಿಯಾಗಿದ್ದ ಸೇನೆ ‘ಭಯೋತ್ಪಾದಕರು’ ಎಂದು ಬಿಲ್ ಪಾಸ್ ಮಾಡಿದೆ. ಬಾಗ್ದಾದ್ ಏರ್ಪೋರ್ಟ್ನಲ್ಲಿ ಅಮೆರಿಕದ ಪಡೆಗಳು ನಡಸಿದ ವೈಮಾನಿಕ ದಾಳಿಯಲ್ಲಿ ಮೇಜರ್ ಜನರಲ್ ಕಾಸಿಮ್ ಸುಲೇಮಾನಿ ಹತ್ಯೆಗೆ ಕಾರಣರಾದ ದುಷ್ಕರ್ಮಿಗಳೆಲ್ಲ ಭಯೋತ್ಪಾದಕರು ಎಂದು ಸ್ಪೀಕರ್ ಅಲಿ ಲಾರಿಜಾನಿ ಹೇಳುವ ಮೂಲಕ ಮಸೂದೆ ಪಾಸ್ ಮಾಡಿದರು.
‘ಅಮೆರಿಕಗೆ ಸಾವು ಖಚಿತ’
ಈ ವೇಳೆ ಜನಪ್ರತಿನಿಧಿಗಳೆಲ್ಲರೂ, ‘ಅಮೆರಿಕಗೆ ಸಾವು ಖಚಿತ’, ‘ನಾವು ರಾಜಿಯಾಗುವುದಿಲ್ಲ, ನಾವು ಶರಣಾಗುವುದಿಲ್ಲ, ಪ್ರತೀಕಾರ! ಪ್ರತೀಕಾರ!’ ಅಂತಾ ಅಧಿವೇಶದಲ್ಲಿ ಘೋಷಣೆ ಕೂಗಿದ್ರು.