ಹೈದರಾಬಾದ್ : ವಿಶ್ವಸಂಸ್ಥೆಯ ವಿಶೇಷ ವರದಿಗಾರ ಜೋಸ್ ಫ್ರಾನ್ಸಿಸ್ಕೊ ಕ್ಯಾಲಿ ಝೇ ವಿಶ್ವದಾದ್ಯಂತ ಸ್ಥಳೀಯ ಸಮುದಾಯಗಳ ಮೇಲೆ ಕೊರೊನಾ ವೈರಸ್ ಬೀರಿರುವ ಪ್ರಭಾವದ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತಾಡಿರುವ ಅವರು, ಕೊರೊನಾ ವೈರಸ್ನಿಂದ ಸ್ಥಳೀಯ ಸಮುದಾಯಗಳ ಮೇಲೆ ಯಾವ ರೀತಿಯ ಪ್ರಭಾವ ಬೀರಿದೆ ಎಂಬವುದರ ಬಗ್ಗೆ ಪ್ರತಿನಿತ್ಯ ಜಗತ್ತಿನ ವಿವಿಧ ಭಾಗಗಳಿಂದ ನಾನು ವರದಿಗಳನ್ನು ಸ್ವೀಕರಿಸುತ್ತಿದ್ದೇನೆ. ಈ ಪೈಕಿ ಎಲ್ಲಾ ವರದಿಗಳು ಸ್ಥಳೀಯ ಸಮುದಾಯಗಳು ಅರೋಗ್ಯ ಸಮಸ್ಯೆಗೆ ತುತ್ತಾಗಿದ್ದಾರೆ ಎಂಬುವುದಾಗಿ ಇರುವುದಿಲ್ಲ. ಇತರ ರೀತಿಯಲ್ಲೂ ಕೊರೊನಾ ಈ ಸಮುದಾಯಗಳ ಮೇಲೆ ಪ್ರಭಾವ ಬೀರುತ್ತಿದೆ ಎಂದಿದ್ದಾರೆ.
ತಮ್ಮ ಭೂಮಿಯನ್ನು, ಕೆಲಸವನ್ನು ಕಳೆದುಕೊಳ್ಳುತ್ತಿರುವ ಈ ಸಮುದಾಯಗಳ ಜನರನ್ನು ಬಡತನ, ಅಪೌಷ್ಟಿಕತೆ, ಶುದ್ಧ ನೀರು ಮತ್ತು ನೈರ್ಮಲ್ಯದ ಕೊರತೆ, ವೈದ್ಯಕೀಯ ಸೇವೆಗಳಿಂದ ಹೊರಗಿಡುವುದು ಇನ್ನಷ್ಟು ಸಮಸ್ಯೆಗಳಿಗೆ ತುತ್ತಾಗಿಸುತ್ತಿವೆ. ಕೆಲ ದೇಶಗಳಲ್ಲಿ ಹೇರಿರುವ ತರ್ತು ಪರಿಸ್ಥಿತಿಗಳು ಮತ್ತು ಮಿಲಿಟರಿ ಆಡಳಿತ ಈ ಸಮುದಾಯದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದ್ದಾರೆ.
ಸ್ಥಳೀಯ ಸಮುದಾಯಗಳ ಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲಾಗುತ್ತಿದೆ. ಅವರ ಕೆಲಸ, ಜಮೀನುಗಳನ್ನು ಕಿತ್ತುಕೊಂಡು ಆಕ್ರಮಣ ನಡೆಸಲಾಗುತ್ತಿದೆ ಎಂದು ಝೇ ವಿಶಾದ ವ್ಯಕ್ತಪಡಿಸಿದ್ದಾರೆ.