ನ್ಯೂಜೆರ್ಸಿ (ಅಮೆರಿಕ): ಬಾಲ್ಕನಿಯಲ್ಲಿ ನಿಂತು ಅಳುತ್ತಿದ್ದ ನಾಲ್ಕು ವರ್ಷದ ಮಗುವಿನಿಂದ ಭಾರತೀಯ ದಂಪತಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಬಾಲ್ಕನಿಯಲ್ಲಿ ನಿಂತು ಏಕಾಂಗಿಯಾಗಿ ಅಳುತ್ತಿದ್ದ ನಾಲ್ಕು ವರ್ಷದ ಬಾಲಕಿಯನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿದ್ದು, ಭಾರತೀಯ ದಂಪತಿ ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ಜರುಗಿದೆ.
![ಯುಎಸ್ನಲ್ಲಿ ಭಾರತೀಯ ದಂಪತಿ ಶವವಾಗಿ ಪತ್ತೆ](https://etvbharatimages.akamaized.net/etvbharat/prod-images/06:31:26:1617886886_mh-parlivaijnath-10081_08042021180135_0804f_1617885095_609.jpg)
ನ್ಯೂಜೆರ್ಸಿಯ ನಾರ್ತ್ ಆರ್ಲಿಂಗ್ಟನ್ ಪ್ರಾಂತ್ಯದ ರಿವರ್ ವ್ಯೂ ಗಾರ್ಡನ್ಸ್ ಸಂಕೀರ್ಣದಲ್ಲಿರುವ 21 ಗಾರ್ಡನ್ ಟೆರೇಸ್ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಬಾಲಾಜಿ ಭರತ್ ರುದ್ರಾವರ್ (32) ಮತ್ತು ಅವರ ಪತ್ನಿ ಆರತಿ ಬಾಲಾಜಿ ರುದ್ರಾವರ್ (30) ಮೃತಪಟ್ಟಿದ್ದಾರೆ. ಈ ವಸತಿ ಸಮುಚ್ಛಯದಲ್ಲಿ 15,000ಕ್ಕೂ ಹೆಚ್ಚು ನಿವಾಸಗಳಿವೆ.
ಅಮೆರಿಕದ ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಉತ್ತರದ ಆರ್ಲಿಂಗ್ಟನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಭಾರತದ ಮೂಲದ ದಂಪತಿ ಚಾಕು ಇರಿತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಶಾಪಿಂಗ್ ಮಾಡಲು ಸೂಪರ್ ಮಾರ್ಕೆಟ್ಗೆ ಲಗ್ಗೆ ಹಾಕಿದ ಉಡ.. ದೈತ್ಯ ಪ್ರಾಣಿ ನೋಡಿ ಬೆಚ್ಚಿಬಿದ್ದ ಗ್ರಾಹಕರು!
ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದ ಪತಿ ಚಾಕುವಿನಿಂದ ಆಕೆಯ ಹೊಟ್ಟೆಗೆ ಇರಿದಿದ್ದಾನೆ. ಬಳಿಕ ಚಾಕು ಚುಚ್ಚಿಕೊಂಡು ಮೃತಪಟ್ಟಿದ್ದಾನೆ ಎಂದು ಮತ್ತೊಂದು ಮಾಧ್ಯಮ ವರದಿ ಮಾಡಿದೆ.
ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದಳು: ಈ ಕುರಿತು ಮಾತನಾಡಿರುವ ಬಾಲಾಜಿ ತಂದೆ ಭರತ್ ರುದ್ರಾವರ್, ನನ್ನ ಮೊಮ್ಮಗಳು ಬಾಲ್ಕನಿಯಲ್ಲಿ ಅಳುತ್ತಿರುವುದನ್ನು ಕಂಡ ನೆರೆಹೊರೆಯವರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ, ಬುಧವಾರ ಪೊಲೀಸರು ಮನೆಗೆ ಪ್ರವೇಶಿಸಿದಾಗ ಪತಿ-ಪತ್ನಿ ಇಬ್ಬರ ಶವಗಳು ಪತ್ತೆಯಾಗಿವೆ. ಸ್ಥಳೀಯ ಪೊಲೀಸರು ಗುರುವಾರ ದುರಂತದ ಬಗ್ಗೆ ನನಗೆ ಮಾಹಿತಿ ನೀಡಿದರು. ಸಾವಿನ ಕಾರಣದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಹಂಚಿಕೊಳ್ಳುವುದಾಗಿ ಅಮೆರಿಕದ ಪೊಲೀಸರು ಹೇಳಿದ್ದಾರೆ. ನನ್ನ ಸೊಸೆ ಏಳು ತಿಂಗಳ ಗರ್ಭಿಣಿಯಾಗಿದ್ದಳು. ನಾವು ಅವರ ಮನೆಗೆ ಹೋಗಿದ್ದೆವು. ಮತ್ತೆ ಅಲ್ಲಿಗೆ ಹೋಗಲು ಯೋಜಿಸುತ್ತಿದ್ದೆವು. ಅಷ್ಟರೊಳಗೆ ಹೀಗಾಗಿದೆ ಎಂದು ತಿಳಿಸಿದ್ದಾರೆ.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಾವಿಗೆ ನಿಖರ ಕಾರಣ ನಿರ್ಧರಿಸಲು ವೈದ್ಯಕೀಯ ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಆದರೆ, ಇಬ್ಬರೂ ಚಾಕು ಇರಿತದಿಂದಲೇ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ವರದಿ ತಿಳಿಸಿದೆ.