ನ್ಯೂ ಯಾರ್ಕ್ (ಯು.ಎಸ್): ವಿಶ್ವಸಂಸ್ಥೆಯ ಲೈಂಗಿಕ ದೌರ್ಜನ್ಯ ವಿರೋಧಿ ಅಭಿಯಾನದಲ್ಲಿ ಭಾಗವಹಿಸಿದ್ದ ಭಾರತೀಯ ಸೇನೆಯ ಮೇಜರ್ ಸುಮನ್ ಗವಾನಿ 'ಯುಎನ್ ಮಿಲಿಟರಿ ಜೆಂಡರ್ ಅಡ್ವೊಕೇಟ್ ಆಫ್ ದಿ ಇಯರ್ ಪ್ರಶಸ್ತಿ'ಗೆ ಆಯ್ಕೆಯಾಗಿದ್ದು, ಅವರನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು 'ಪ್ರಬಲ ರೋಲ್ ಮಾಡೆಲ್' ಎಂದು ಕರೆದಿದ್ದಾರೆ.
ಸುಮನ್ ಗವಾನಿ ತಮ್ಮ ಬೆಂಬಲ, ಮಾರ್ಗದರ್ಶನ ಮತ್ತು ನಾಯಕತ್ವದ ಮೂಲಕ ಸಂಘರ್ಷದ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯವನ್ನು ತಡೆಯುವ ಮೂಲಕ ವಿಶ್ವಸಂಸ್ಥೆಗೆ ಸಹಾಯ ಮಾಡಿದರು ಎಂದು ಹೇಳಿರುವ ವಿಶ್ವಸಂಸ್ಥೆ ಈ ಪ್ರಶಸ್ತಿಯನ್ನು ಪ್ರಕಟಿಸಿದೆ.
ದಕ್ಷಿಣ ಸುಡಾನ್‌ನಲ್ಲಿ ಯುಎನ್ ಮಿಷನ್‌ನೊಂದಿಗೆ ಮಿಲಿಟರಿ ವೀಕ್ಷಕರಾಗಿ ನಿಯೋಜಿಸಲ್ಪಟ್ಟಾಗ ಗವಾನಿ "ಲೈಂಗಿಕ ದೌರ್ಜನ್ಯದ ಬಗ್ಗೆ 230ಕ್ಕೂ ಹೆಚ್ಚು ಯುಎನ್ ಮಿಲಿಟರಿ ವೀಕ್ಷಕರಿಗೆ ಮಾರ್ಗದರ್ಶನ ನೀಡಿದರು ಮತ್ತು ಮಿಷನ್‌ನ ಪ್ರತಿಯೊಂದು ತಂಡದ ತಾಣಗಳಲ್ಲಿ ಮಹಿಳಾ ಮಿಲಿಟರಿ ವೀಕ್ಷಕರಿರುವಂತೆ ಕ್ರಮ ಕೈಗೊಂಡಿದ್ದರು" ಎಂದು ವಿಶ್ವಸಂಸ್ಥೆ ತಿಳಿಸಿದೆ.
ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸುಮನ್ ಗವಾನಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.