ವಾಷಿಂಗ್ಟನ್ (ಅಮೆರಿಕ) : ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿಯಾಗಿ ಭಾರತೀಯ ಅಮೆರಿಕನ್ ವೇದಾಂತ್ ಪಟೇಲ್ರನ್ನು ನೇಮಕ ಮಾಡಲಾಗಿದೆ.
ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಭಾರತ ಮೂಲದ ಅಮೆರಿಕನ್ ವೇದಾಂತ್ ಪಟೇಲ್ ಅವರನ್ನು ಶ್ವೇತಭವನದ ಸಂವಹನ ವಿಭಾಗದ ಸಹಾಯಕ ಮಾಧ್ಯಮ ಕಾರ್ಯದರ್ಶಿಯನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ.
ಯುಎಸ್ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಬೈಡನ್ ಪರ ಪ್ರಚಾರ ಕಾರ್ಯದ ಪ್ರಾದೇಶಿಕ ಸಂವಹನ ನಿರ್ದೇಶಕರಾಗಿ ವೇದಾಂತ್ ಪಟೇಲ್ ಕಾರ್ಯನಿರ್ವಹಿಸಿದ್ದರು. ಸದ್ಯ ವೇದಾಂತ್, ಜೋ ಬೈಡನ್ ಅವರ ವಕ್ತಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಯುಎಸ್ನಲ್ಲಿ 2ನೇ ಕೋವಿಡ್ ಲಸಿಕೆಗೆ ಅನುಮೋದನೆ: ಸೋಮವಾರ ಲಸಿಕೆ ಪಡೆಯಲಿರುವ ಬೈಡನ್
ಬೈಡನ್-ಹ್ಯಾರಿಸ್ ತಂಡ ಬಿಡುಗಡೆ ಮಾಡಿದ ಬಯೋ ಪ್ರಕಾರ, ವೇದಾಂತ್ ಪಟೇಲ್ ಅವರು ಭಾರತದಲ್ಲಿ ಜನಿಸಿದ್ದು, ಕ್ಯಾಲಿಫೋರ್ನಿಯಾದಲ್ಲಿ ಬೆಳೆದಿದ್ದಾರೆ. ಕ್ಯಾಲಿಫೋರ್ನಿಯಾ-ರಿವರ್ಸೈಡ್ ವಿಶ್ವವಿದ್ಯಾಲಯ ಮತ್ತು ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಪಟೇಲ್ ಅವರು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿಯವರ ತಂಡದಲ್ಲಿ ಕೆಲಸ ಮಾಡಲಿದ್ದಾರೆ.