ವಾಷಿಂಗ್ಟನ್ (ಯುಎಸ್): ಉಭಯ ಪಕ್ಷೀಯ ಟೀಕೆಗಳ ಮಧ್ಯೆ ಮ್ಯಾನೇಜ್ಮೆಂಟ್ ಮತ್ತು ಬಜೆಟ್ (ಒಎಂಬಿ) ಕಚೇರಿಯನ್ನು ಮುನ್ನಡೆಸಲು ನಾಮಪತ್ರ ಹಿಂತೆಗೆದುಕೊಂಡಿದ್ದ ಭಾರತೀಯ-ಅಮೆರಿಕನ್ ಮಹಿಳೆ ನೀರಾ ಟಂಡನ್ ಈಗ ಅಧ್ಯಕ್ಷ ಜೋ ಬೈಡನ್ ಅವರ ಹಿರಿಯ ಸಲಹೆಗಾರರಾಗಿ ಶ್ವೇತಭವನಕ್ಕೆ ಸೇರಲಿದ್ದಾರೆ ಎಂದು ಬೈಡನ್ ಆಡಳಿತ ಪ್ರಕಟಿಸಿದೆ.
ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ (ಸಿಎಪಿ) ಸಂಸ್ಥಾಪಕ ಜಾನ್ ಪೊಡೆಸ್ಟಾ, "ನೀರಾ ಅವರ ಬುದ್ಧಿಶಕ್ತಿ, ದೃಢತೆ ಮತ್ತು ರಾಜಕೀಯ ಬುದ್ಧಿವಂತಿಕೆ ಬೈಡನ್ ಆಡಳಿತಕ್ಕೆ ಆಸ್ತಿಯಾಗುತ್ತದೆ. ಏಕೆಂದರೆ ಅವರು ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ಹೊಸ ಪಾತ್ರವನ್ನು ವಹಿಸುತ್ತಾರೆ. 2003ರಲ್ಲಿ ನಾವು ಒಟ್ಟಾಗಿ ಸ್ಥಾಪಿಸಿದ ಒಂದು ಸಂಸ್ಥೆ - ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್‌ನಲ್ಲಿ ಅವರ ಗಣನೀಯ ನೀತಿ ಪರಿಣತಿ ಮತ್ತು ನಾಯಕತ್ವವನ್ನು ಕಳೆದುಕೊಂಡಿರುವುದಕ್ಕೆ ನಾವು ವಿಷಾದಿಸುತ್ತೇವೆ. ಈ ಶ್ವೇತಭವನ ಮತ್ತು ಅಮೆರಿಕನ್ನರಿಗೆ ಸೇವೆ ಸಲ್ಲಿಸುತ್ತಿರುವ ಹೊಸ ಸ್ಥಾನಕ್ಕೆ ಅವರು ಹೆಜ್ಜೆ ಹಾಕಿದ್ದನ್ನು ನೋಡಿ ನಾನು ರೋಮಾಂಚನಗೊಂಡಿದ್ದೇನೆ" ಎಂದಿದ್ದಾರೆ.
ಬೈಡನ್ ಆಡಳಿತದಲ್ಲಿ ಅನೇಕ ನೀತಿ ಪರಿಹಾರಗಳನ್ನು ಸಿಎಪಿಯಲ್ಲಿ ಹಲವು ವರ್ಷಗಳಿಂದ ಅಭಿವೃದ್ಧಿಪಡಿಸಲಾಗಿದೆ ಮತ್ತು ಮುನ್ನಡೆಸಲಾಗಿದೆ ಎಂದು ಅವರು ಹೇಳಿದರು.
ಟಂಡನ್ ಸಿಎಪಿ ಅಧ್ಯಕ್ಷೆ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಂಟರ್ ಫಾರ್ ಅಮೆರಿಕನ್ ಪ್ರೋಗ್ರೆಸ್ ಆಕ್ಷನ್ ಫಂಡ್‌ನ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಮಾರ್ಚ್ನಲ್ಲಿ, ಸೆನೆಟ್ನಲ್ಲಿ ಡೆಮೋಕ್ರಾಟ್ಗಳು ಸಾಕಷ್ಟು ಮತಗಳನ್ನು ಪಡೆಯಲು ವಿಫಲವಾದ ನಂತರ ಟಂಡನ್ ಶ್ವೇತಭವನದ ಒಎಂಬಿ ನಿರ್ದೇಶಕರಾಗಿ ನಾಮನಿರ್ದೇಶನವನ್ನು ಹಿಂತೆಗೆದುಕೊಂಡಿದ್ದರು.