ನ್ಯೂಯಾರ್ಕ್, ಅಮೆರಿಕ: ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿದ್ದು, ಅಲ್ಲಿರುವ ಭಾರತೀಯ ಪ್ರಜೆಗಳ ಭದ್ರತೆ ಮತ್ತು ಅವರನ್ನು ಸುರಕ್ಷಿತವಾಗಿ ಕರೆತರಲು ಭಾರತ ಮುಂದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸ್ಪಷ್ಟನೆ ನೀಡಿದರು.
ಶಾಂತಿ ಪಾಲನೆ ಕುರಿತಂತೆ ಮುಕ್ತ ಚರ್ಚೆಯ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಜೈಶಂಕರ್ ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಧ್ವನಿಯೆತ್ತಿದರು. ಈ ವೇಳೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆ, ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ಟ ಹಾಗೂ ಇತರ ಸಹೋದ್ಯೋಗಳಿದ್ದರು.
ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರಸ್ ಮತ್ತು ಹಲವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಗಳಲ್ಲೂ ಕೂಡಾ ಜೈಶಂಕರ್ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಚರ್ಚಿಸಿದ್ದಾರೆ. ಜೊತೆಗೆ ಈ ಬೆಳವಣಿಗೆ ಬಗ್ಗೆ ಭಾರತ ತುಂಬಾ ಎಚ್ಚರಿಕೆಯಿಂದಿದೆ ಎಂದಿದ್ದಾರೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಅಫ್ಘಾನಿಸ್ತಾನದ ಪರಿಸ್ಥಿತಿಯ ಕುರಿತು ತುರ್ತು ಸಭೆಯನ್ನು ನಡೆಸುತ್ತಿದ್ದಂತೆ ನ್ಯೂಯಾರ್ಕ್‌ಗೆ ಆಗಮಿಸಿದ್ದ ಅವರು, 10 ದಿನಗಳಲ್ಲಿ ಎರಡನೇ ಬಾರಿಗೆ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದೊಂದಿಗೆ ಚರ್ಚೆ ನಡೆಸಿದ್ದಾರೆ.
ಮತ್ತೊಂದೆಡೆ ತಾಲಿಬಾನ್ ದಂಗೆಕೋರರು ಆಫ್ಘನ್ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ಭಾರತವು ತನ್ನ ರಾಯಭಾರಿ ಟಂಡನ್ ಮತ್ತು ಸಿಬ್ಬಂದಿಯನ್ನು ರಾಯಭಾರ ಕಚೇರಿಯಿಂದ ಭಾರತಕ್ಕೆ ಕರೆತಂದಿದೆ. ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ವಿಮಾನವು ರಾಜತಾಂತ್ರಿಕರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಅಫ್ಘಾನಿಸ್ತಾನದಲ್ಲಿದ್ದ ಕೆಲವು ಭಾರತೀಯರನ್ನು ಕರೆತಂದಿದೆ.
ಇದನ್ನೂ ಓದಿ: 'ಮಾನವೀಯತೆಯ ಆಧಾರ'ದ ಮೇಲೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಕುಟುಂಬಕ್ಕೆ UAE ಆಶ್ರಯ