ವಾಷಿಂಗ್ಟನ್: ಭಾರತ-ಅಮೆರಿಕ ನಡುವಿನ ಎರಡನೇ 2+2 ಸಭೆಯು ವಾಷಿಂಗ್ಟನ್ನಲ್ಲಿ ಡಿಸೆಂಬರ್ 18ರಂದು ನಡೆಯಲಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ವಿದೇಶಾಂಗ ಮತ್ತು ರಕ್ಷಣಾ ಸಚಿವರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದು, ಉಭಯ ರಾಷ್ಟ್ರಗಳು ಗಡಿ ರಕ್ಷಣಾ ಕಾರ್ಯತಂತ್ರದ ಕುರಿತು ಚರ್ಚಿಸಲಿದ್ದಾರೆ. ಸಭೆಯ ಬಗೆಗಿನ ಅಂತಿಮ ರೂಪುರೇಷೆಗಳು ಮುಕ್ತಾಯ ಕಂಡಿವೆ ಎಂದು ಹೇಳಿದ್ದಾರೆ.
ಸಚಿವರ ಮಟ್ಟದ ಪ್ರಥಮ 2+2 ಸಭೆಯು 2018ರ ಸೆಪ್ಟೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆದಿತ್ತು. ಇರಾನ್ ಕಚ್ಚಾತೈಲದ ಆಮದು ಮೇಲಿನ ನಿರ್ಬಂಧ, ಇಂಡೋ- ಪೆಸಿಫಿಕ್ ಪ್ರದೇಶದಲ್ಲಿ ಸಹಕಾರ ಹೆಚ್ಚಳ, ರಕ್ಷಣಾ ತಂತ್ರಜ್ಞಾನ, ಮಿಲಿಟರಿ ಸಹಕಾರ, ಸೈಬರ್ ಮಾಹಿತಿ, ಭಯೋತ್ಪಾದನೆ ನಿಗ್ರಹಿಸಲು ಗುಪ್ತಚರ ಮಾಹಿತಿ ಹಂಚಿಕೆ, ಗಡಿ ಮತ್ತು ಕಡಲು ಭದ್ರತೆ, ಹಣಕಾಸು ವಂಚನೆಯಂತಹ ಅನೇಕ ವಿಷಯಗಳು ಚರ್ಚೆ ಆಗಿದ್ದವು.
ಅಂದಿನ ಸಭೆಯಲ್ಲಿ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ದಿ. ಸುಷ್ಮಾ ಸ್ವರಾಜ್, ಅಂದಿನ ರಕ್ಷಣಾ ಸಚಿವೆ ಈಗಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ರಕ್ಷಣಾ ಇಲಾಖೆ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಸೇರಿ ಎರಡೂ ರಾಷ್ಟ್ರಗಳ ನಿಯೋಗಗಳಲ್ಲಿ ತಲಾ 12 ಅಧಿಕಾರಿಗಳು ಭಾಗವಹಿಸಿದ್ದರು.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಮ್ಮ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮತ್ತು ಮಾರ್ಕ್ ಟಿ. ಎಸ್ಪರ್ ಭಾಗವಹಿಸಲಿದ್ದಾರೆ.