ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ಸಂಬಂಧವು ಅಸಾಧಾರಣವಾಗಿದ್ದು, ತಮ್ಮ ಭೇಟಿ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ತಮ್ಮ ಎರಡು ದಿನಗಳ ಭಾರತ ಪ್ರವಾಸದ ಬಗ್ಗೆ ಮಾತನಾಡಿರುವ ಅವರು, ಭಾರತದಲ್ಲಿ ನಮ್ಮನ್ನು ಆದರಾತಿಥ್ಯಗಳಿಂದ ನೋಡಿಕೊಳ್ಳಲಾಯಿತು. ನಾವು ಅದನ್ನು ನಿಜವಾಗಿಯೂ ಆನಂದಿಸಿದ್ದೇವೆ. ಎರಡೂ ದೇಶದ ಸಂಬಂಧದ ದೃಷ್ಟಿಯಿಂದ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದಿದ್ದಾರೆ.
ಅಮೆರಿಕಕ್ಕೆ ತೆರಳಿದ ನಂತರ ಮೋದಿಗೆ ಧನ್ಯವಾದ ತಿಳಿಸಿದ್ದ ಇವಾಂಕಾ, 'ನಿಮ್ಮ ಸುಂದರ ದೇಶಕ್ಕೆ ನಾವು ಭೇಟಿ ನೀಡಿದಾಗ ದೊರೆತ ಆತ್ಮೀಯ ಆತಿಥ್ಯವನ್ನು ಸ್ವೀಕರಿಸಿದ್ದೇವೆ. ಭಾರತ ಮತ್ತು ಅಮೆರಿಕದ ಶಕ್ತಿ, ಚೇತನ ಮತ್ತು ಐಕ್ಯತೆಯನ್ನು ಆಚರಿಸಿದ್ದೇವೆ' ಎಂದು ತಿಳಿಸಿದ್ದಾರೆ.
'ನಮ್ಮ ಎರಡು ದೇಶಗಳ ನಡುವೆ ಬಲವಾದ ಕಾರ್ಯತಂತ್ರದ ಸಹಭಾಗಿತ್ವ, ಆರ್ಥಿಕ ಸಂಬಂಧಗಳು ಮತ್ತು ಭದ್ರತಾ ಸಂಬಂಧ ವಿಸ್ತರಿಸುವುದನ್ನು ಈ ಭೇಟಿ ಪುನರುಚ್ಚರಿಸಿತು. ಅದ್ಭುತ ಪ್ರವಾಸ, ಅಮೆರಿಕಕ್ಕೆ ಬಂದಿರುವುದು ಸಂತೋಷವಾಗಿದೆ. ಭಾರತಕ್ಕೆ ಧನ್ಯವಾದಗಳು' ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಸ್ಟೆಫನಿ ಗ್ರಿಶಮ್ ಹೇಳಿದ್ದಾರೆ.
ಭೇಟಿಯ ಸಮಯದಲ್ಲಿ, ಭಾರತ ಮತ್ತು ಅಮೆರಿಕ 3 ಬಿಲಿಯನ್ ಡಾಲರ್ ಮೌಲ್ಯದ ರಕ್ಷಣಾ ಒಪ್ಪಂದಗಳನ್ನು ಅಂತಿಮಗೊಳಿಸಿದೆ. ಇದರ ಅಡಿಯಲ್ಲಿ 30 ಮಿಲಿಟರಿ ಹೆಲಿಕಾಪ್ಟರ್ಗಳನ್ನು ಖರೀದಿಸುವುದು, 2.6 ಬಿಲಿಯನ್ ಡಾಲರ್ ವೆಚ್ಚದಲ್ಲಿ 24 ಎಮ್ಹೆಚ್-60 ರೋಮಿಯೋ ಹೆಲಿಕಾಪ್ಟರ್ಗಳನ್ನು ಖರೀದಿಸುವುದು ಈ ಒಪ್ಪಂದಗಳಲ್ಲಿ ಸೇರಿದೆ.