ವಾಷಿಂಗ್ಟನ್(ಅಮೆರಿಕ): ಕೋವಿಡ್ ಲಸಿಕೆ ಉತ್ಪಾದನಾ ವಿಚಾರಕ್ಕೆ ಬರುವುದಾದರೆ ಭಾರತ ಕೋವಿಡ್ ಸಾಂಕ್ರಾಮಿಕ ರೋಗವನ್ನು ಅಂತ್ಯಗೊಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ಅಧಿಕಾರಿಯೊಬ್ಬರು ಈ ಭವಿಷ್ಯ ನುಡಿದಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (USAID) ಆಡಳಿತಾಧಿಕಾರಿ ಸಮಂತಾ ಪವರ್ ಈ ಹೇಳಿಕೆ ನೀಡಿದ್ದು, ಲಸಿಕೆ ಉತ್ಪಾದನೆಗಾಗಿ ದೀರ್ಘಕಾಲದ ಹೂಡಿಕೆಯನ್ನು ಭಾರತ ಮಾಡಿದೆ. ಇದರಿಂದ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಾಗಲಿದೆ. ಲಸಿಕೆ ತಯಾರಿಕೆಯ ಮೇಲಿನ ರಫ್ತು ನಿಷೇಧವನ್ನು ತೆಗೆದುಹಾಕಲಾಗುವುದು. ಇದರಿಂದಾಗಿ ಕೋವಿಡ್ ತಡೆಯಲು ಭಾರತ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಅವರು ನಾವು ನಿಜವಾಗಿಯೂ ಕಷ್ಟದಲ್ಲಿದ್ದೇವೆ. ಈಗ ಎಲ್ಲರಿಗೂ ತಿಳಿದಿರುವಂತೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆಯ ಕೊರತೆಯಿದೆ. ಕೋವಿಡ್ ನಿರ್ಮೂಲನೆಗೆ ವಿಶ್ವದ ನಾಯಕರು ತೆಗೆದುಕೊಂಡಿರುವ ಗುರಿಗಳನ್ನು ಪೂರೈಸಲು ಪ್ರಮುಖ ಪಾಲುದಾರ ಭಾರತವಾಗಲಿದೆ. ಮುಂದಿನ ವರ್ಷ ವಿಶ್ವದ 70 ರಷ್ಟು ಮಂದಿ ಲಸಿಕೆ ಪಡೆಯುವುದು ಅತ್ಯಂತ ಮುಖ್ಯ ಎಂದು ವಿಶ್ವಸಂಸ್ಥೆ ಹೇಳಿದ್ದು, ಇದಕ್ಕೆ ಭಾರತ ಪೂರಕವಾಗಲಿದೆ ಎಂದಿದ್ದಾರೆ.
ಭಾರತ ಸ್ಫೂರ್ತಿ
ಕೋವಿಡ್ ವಿಚಾರದಲ್ಲಿ ಭಾರತ ಸ್ಫೂರ್ತಿಯಾಗಿದೆ. ಎಲ್ಲರೂ ಕೋವಿಡ್ನಲ್ಲಿಯೇ ಇರುತ್ತೇವೆ. ಭಾರತವೂ ಕೂಡಾ ಹವಾಮಾನ ವೈಪರಿತ್ಯ ಮತ್ತು ಕೋವಿಡ್ ಎರಡನ್ನೂ ನಿಭಾಯಸುತ್ತಿದೆ ಎಂದು ಸಮಂತಾ ಪವರ್ ಹೇಳಿದ್ದಾರೆ.
ಕೋವಿಡ್ ಲಸಿಕೆಗಳಿಗೆ ಮಾತ್ರವಲ್ಲ, ಹಲವು ದೇಶಗಳಲ್ಲಿರುವ ಇತರ ರೋಗಗಳಿಗೆ ಲಸಿಕೆ ಹಾಕುವ ಕೇಂದ್ರವಾಗಿಯೂ ದೇಶ ಮಾರ್ಪಾಡಾಗುತ್ತಿದೆ ಎಂದು ಸಮಂತಾ ಪವರ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾರತದ ಅಮೆರಿಕನ್ ರಾಯಭಾರಿ ರಿಚರ್ಡ್ ವರ್ಮಾ ಭಾಗಿಯಾಗಿದ್ದರು.
ಇದನ್ನೂ ಓದಿ: ಯುದ್ದ ವಿಮಾನಗಳ ನಿಗ್ರಹ ಕ್ಷಿಪಣಿ ಯಶಸ್ವಿಯಾಗಿ ಪರೀಕ್ಷಿಸಿದ ಉತ್ತರ ಕೊರಿಯಾ