ನ್ಯೂಯಾರ್ಕ್: ಮಹಾತ್ಮ ಗಾಂಧೀಜಿ 150ನೇ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಭಾರತ ವಿಶ್ವಸಂಸ್ಥೆಗೆ(UN) ಗ್ರೀನ್ ಎಲೆಕ್ಟ್ರಿಸಿಟಿ ಸೋಲಾರ್ ಫಲಕಗಳನ್ನು ಉಡುಗೊರೆಯಾಗಿ ಕೊಟ್ಟಿದೆ.
ಭಾರತ ನೀಡಿದ ಉಡುಗೊರೆ 'ಗಾಂಧಿ ಸೋಲಾರ್ ಉದ್ಯಾನ' (ಗಾಂಧಿ ಸೋಲಾರ್ ಪಾರ್ಕ್) ಹವಾಮಾನ ವೈಪರೀತ್ಯದ ವಿರುದ್ಧ ಹೋರಾಟದ ಸಂಕೇತವಾಗಿದೆ. ವಿಶ್ವ ಸಂಸ್ಥೆ ಪ್ರಧಾನ ಕಚೇರಿಯು ಮುಂದಿನ ದಿನಗಳಲ್ಲಿ ಹಸಿರು ವಿದ್ಯುಚ್ಛಕ್ತಿಯೊಂದಿಗೆ ಜಗಮಗಿಸಲಿದೆ. ಇದಕ್ಕೆ ಸುಮಾರು 1 ಮಿಲಿಯನ್ ಡಾಲರ್ ವಿನಿಯೋಗವಾಗಲಿದ್ದು, 193 ಸೌರ ಫಲಕಗಳಿಂದ 50 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.
ವಿಶ್ವ ಸಂಸ್ಥೆಯ ಸದಸ್ಯ ರಾಷ್ಟ್ರವಾದ ಭಾರತ ಈ ಉಡುಗೊರೆಯ ಜೊತೆಗೆ 150 ಮರಗಳಿಂದ ಕೂಡಿದ 'ಗಾಂಧಿ ಶಾಂತಿ ಉದ್ಯಾನ'ವನ್ನೂ ಸಹ ನೀಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹವಾಮಾನ ವೈಪರೀತ್ಯದ ಬಗ್ಗೆ ವಿಶ್ವ ಸಮುದಾಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಏರುತ್ತಿರುವ ಜಾಗತಿಕ ತಾಪಮಾನವನ್ನು ಹಂತ ಹಂತವಾಗಿ ತಗ್ಗಿಸಲು ಸುಸ್ಥಿರ ಅಭಿವೃದ್ಧಿಯ ಒಪ್ಪಂದಗಳಿಗೆ ಯುಎನ್ ಸದಸ್ಯ ರಾಷ್ಟ್ರಗಳು ಸಹಿ ಹಾಕಿವೆ. ಪ್ರಕೃತಿ ಸಂರಕ್ಷಣೆ ಬಗೆಗಿನ ಬದ್ಧತೆಯನ್ನು ಲೋಕಕ್ಕೆ ಸಾರಲು ಭಾರತ, ಗ್ರೀನ್ ಎಲೆಕ್ಟ್ರಿಸಿಟ್ಯನ್ನು ಗಿಫ್ಟ್ ರೂಪದಲ್ಲಿ ನೀಡಿದೆ.