ವಾಷಿಂಗ್ಟನ್ : ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ(IMF Chief Economist)ಯಾಗಿ ಕಾರ್ಯ ನಿರ್ವಹಿಸುತ್ತಿರುವ ಗೀತಾ ಗೋಪಿನಾಥ್ ಅವರ ಸೇವಾವಧಿ ಮುಂದಿನ ವರ್ಷದ ಜನವರಿಗೆ ಮುಕ್ತಾಯವಾಗುತ್ತಿದೆ.
ಐಎಂಎಫ್ನಲ್ಲಿ ತಮ್ಮದೇ ಆದ ಪ್ರಭಾವ ಬೀರಿರುವ ಮೈಸೂರು ಮೂಲದ ಗೀತಾ ಗೋಪಿನಾಥ್ (49) ಅವರು ಸೇವಾವಧಿ ಮುಕ್ತಾಯವಾದ ಬಳಿಕ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಹುದ್ದೆಗೆ ವಾಪಸ್ ಆಗಲಿದ್ದಾರೆ.
ಗೀತಾ ಗೋಪಿನಾಥ್ ಅವರು 2019 ರ ಜನವರಿಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ಅಂತಾರಾಷ್ಟ್ರೀಯ ಹಣಕಾಸು ನಿಧಿಗೆ (IMF) ಸೇರಿದ್ದರು. ಜೊತೆಗೆ ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಂಶೋಧನಾ ವಿಭಾಗದಲ್ಲಿ ಸಹೋದ್ಯೋಗಿಗಳ ಗೌರವ ಮತ್ತು ಮೆಚ್ಚುಗೆಯನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೋವಿಡ್ -19 ಸಾಂಕ್ರಾಮಿಕ ಮತ್ತು ಲಸಿಕೆ ಗುರಿಗಳು ಹಾಗೂ ಹವಾಮಾನ ಬದಲಾವಣೆ ತಗ್ಗಿಸುವಿಕೆಯ ಕುರಿತು ವಿಶ್ಲೇಷಣಾತ್ಮಕ ಸಂಶೋಧನೆಯನ್ನು ಸಹ ನಡೆಸಿದ್ದಾರೆ.
'ಹಣಕಾಸು ನಿಧಿಗೆ ಗೀತಾ ಅವರ ಕೊಡುಗೆ ನಿಜಕ್ಕೂ ಗಮನಾರ್ಹವಾಗಿದೆ. IMF ನ ಕೆಲಸದ ಮೇಲೆ ಅವರು ಹೆಚ್ಚು ಪ್ರಭಾವ ಬೀರಿದ್ದಾರೆ' ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ತಿಳಿಸಿದ್ದಾರೆ.