ಲಾಸ್ ಏಂಜಲೀಸ್: ಈ ತಿಂಗಳಲ್ಲಿ ನಡೆಯಬೇಕಿದ್ದ 63 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ಕೋವಿಡ್ ಕಾರಣದಿಂದ ವಿಳಂಬವಾಗಿದೆ. ಈ ಸಮಾರಂಭವು ಮಾರ್ಚ್ 14 ರಂದು ನಡೆಯಲಿದೆ ಎಂದು ಗ್ರ್ಯಾಮಿ ಸಂಘಟಕರು ಮಾಹಿತಿ ನೀಡಿದ್ದಾರೆ.
"ಲಾಸ್ ಏಂಜಲೀಸ್ನಲ್ಲಿ ಹದಗೆಡುತ್ತಿರುವ ಕೋವಿಡ್ ಪರಿಸ್ಥಿತಿ, ಹೆಚ್ಚಿದ ಆಸ್ಪತ್ರೆ ಸೇವೆಗಳು, ಎಲ್ಲಾ ಕಡೆ ಐಸಿಯುಗಳು ತುಂಬಿಕೊಂಡಿವೆ, ಹಾಗಾಗಿ ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಹೊಸ ಮಾರ್ಗಸೂಚಿಗಳನ್ನು ತಂದಿವೆ. ಈ ಕಾರಣದಿಂದಾಗಿ ನಮ್ಮ ಕಾರ್ಯಕ್ರಮ ಮುಂದೂಡುವುದು ಸರಿಯಾದ ಕೆಲಸ ಎಂದು ತೀರ್ಮಾನಿಸಲಾಗಿದೆ" ಎಂದು ತಿಳಿಸಿದೆ. ಇದಕ್ಕೆ ರೆಕಾರ್ಡಿಂಗ್ ಅಕಾಡೆಮಿಯ ಕಾರ್ಯನಿರ್ವಾಹಕರು ಸಹಿ ಮಾಡಿದ್ದಾರೆ.
"ನಮ್ಮ ಸಂಗೀತ ಗುಂಪಿನಲ್ಲಿರುವವರು ಹಾಗೂ ಕಾರ್ಯಕ್ರಮ ನಿರ್ಮಿಸುವಲ್ಲಿ ದಣಿವಿಲ್ಲದೇ ಕೆಲಸ ಮಾಡುವ ನೂರಾರು ಜನರ ಆರೋಗ್ಯ ಮತ್ತು ಸುರಕ್ಷತೆಗಿಂತ ಯಾವುದೂ ಮುಖ್ಯವಲ್ಲ", ಎಂದು ಸಂಘಟನೆ ಹೇಳಿದೆ.
ಜನವರಿ 31 ರಂದು ನಡೆಯಬೇಕಿದ್ದ ಸಮಾರಂಭವು ನಾಲ್ಕು ವಾರಗಳ ಮುನ್ನವೇ ವಿಳಂಬವಾಗಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದಾಗಿ ಲಾಸ್ ಏಂಜಲೀಸ್ನಲ್ಲಿ ಕೆಲ ಒಕ್ಕೂಟಗಳು ಮತ್ತು ಮನರಂಜನೋದ್ಯಮಗಳು ಚಲನಚಿತ್ರಗಳು, ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲು ಕರೆ ನೀಡಿವೆ.