ಸ್ಯಾನ್ ಫ್ರಾನ್ಸಿಸ್ಕೋ: ಲಾಕ್ಡೌನ್ನಿಂದಾಗಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಹಂತ ಹಂತವಾಗಿ ಕಚೇರಿಗೆ ಕರೆ ತರಲು ಗೂಗಲ್ ನಿರ್ಧರಿಸಿದೆ ಮತ್ತು ಮನೆಯಿಂದಲೇ ಕೆಲಸ ಮಾಡುವವರಿಗೆ ಅವರ ಕಚೇರಿ ಪೀಠೋಪಕರಣ ಹಾಗೂ ಇತ್ಯಾದಿ ಖರ್ಚು ವೆಚ್ಚಗಳಿಗಾಗಿ ಜಾಗತಿಕವಾಗಿ ಪ್ರತಿಯೊಬ್ಬ ಸಿಬ್ಬಂದಿಗೂ 1 ಸಾವಿರ ಯುಎಸ್ ಡಾಲರ್ ( ಭಾರತೀಯ 75 ಸಾವಿರ ರೂ.) ನೀಡಲು ಮುಂದಾಗಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಜುಲೈ 6ರಿಂದ ಹೆಚ್ಚಿನ ನಗರಗಳಲ್ಲಿ ಬಹುತೇಕ ಕಚೇರಿಗಳನ್ನು ಪುನಾರಂಭಿಸಲಿದ್ದೇವೆ. ಕಚೇರಿಗೆ ಮರಳಲು ಇಚ್ಛಿಸುವ ಸಿಬ್ಬಂದಿಗೆ ಶಿಫ್ಟ್ ಆಧಾರದಲ್ಲಿ ಅವಕಾಶ ನೀಡುತ್ತೇವೆ. ಆಯಾ ದೇಶಗಳ ನಿಯಮಗಳಿಗೆ ಅನುಗುಣವಾಗಿ ಸೆಪ್ಟೆಂಬರ್ ವೇಳೆಗೆ ಶೇ. 30ರಷ್ಟು ಸಿಬ್ಬಂದಿಯನ್ನು ಕಚೇರಿಗ ಕರೆಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಈ ವರ್ಷದ ಇನ್ನುಳಿದ ಕೆಲ ತಿಂಗಳು ಬಹುತೇಕ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ. ಹಾಗಾಗಿ ಅವರಿಗೆ ಮನೆಯಲ್ಲೇ ಕಚೇರಿಯ ಮಾದರಿಯಲ್ಲಿ ಕೆಲಸ ಮಾಡಲು ಬೇಕಾದ ಪೀಠೋಪಕರಣ ಖರೀದಿಸಲು 1 ಸಾವಿರ ಯುಎಸ್ ಡಾಲರ್ ನೀಡುವುದಾಗಿ ಪಿಚೈ ಘೋಷಿಸಿದ್ದಾರೆ.