ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿರಿಯ ಮಗನ ಪ್ರಿಯತಮೆಗೂ ಕೊರೊನಾ ಬಾಧಿಸಿದೆ. ಹೀಗಾಗಿ ವೈಟ್ಹೌಸ್ನಲ್ಲಿ ಆತಂಕ ಹೆಚ್ಚಾಗಿದೆ.
ಈ ಬಗ್ಗೆ ಯುಎಸ್ ಮಾಧ್ಯಮಗಳು ವರದಿ ಮಾಡಿದೆ. ಫಾಕ್ಸ್ ನ್ಯೂಸ್ನಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡಿದ್ದ ಕಿಂಬರ್ಲಿ ಗಿಲ್ಫಾಯ್ಲ್, ಟ್ರಂಪ್ ಮಗನ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು. ಯುಎಸ್ ಅಧ್ಯಕ್ಷರ ಭಾಷಣ ಕೇಳಲು ಹಾಗೂ ಪಟಾಕಿ ಸಂಭ್ರಮಾಚರಣೆ ನೋಡಲು ನೋಡಲು ದಕ್ಷಿಣ ಡಕೋಟಾದ ಮೌಂಟ್ ರಶ್ಮೋರ್ಗೆ ಪ್ರಯಾಣಿಸಿದ್ದರು.
51ರ ಹರೆಯದ ಗಿಲ್ಫಾಯ್ಲ್, ಅಧ್ಯಕ್ಷರೊಂದಿಗೆ ನಿಕಟ ಸಂಪರ್ಕಕ್ಕೆ ಬರುವ ಕಾರಣಕ್ಕೆ ನಡೆಸುವ ದೈನಂದಿನ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢವಾಗಿದೆ. ಸೋಂಕು ಪತ್ತೆಯಾದ ತಕ್ಷಣವೇ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಪತ್ರಿಕೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಟ್ರಂಪ್ ಕ್ಯಾಂಪೇನ್ನ ಹಣಕಾಸು ಸಮಿತಿಯ ಮುಖ್ಯಸ್ಥ ಸೆರ್ಗಿಯೋ ಗೋರ್ ಹೇಳುವ ಪ್ರಕಾರ, ಗಿಲ್ಫಾಯ್ಲ್ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ರೋಗಲಕ್ಷಣವಿಲ್ಲದ ಕಾರಣ ಪಾಸಿಟಿವ್ ಪತ್ತೆಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತೆ ಟೆಸ್ಟ್ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ, ಟ್ರಂಪ್ ಮಗನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನೂ ಕ್ವಾರಂಟೈನ್ ಮಾಡಲಾಗಿದೆ. ಅವರ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.