ಪೋರ್ಟ್ ಔ ಫ್ರಿನ್ಸ್(ಹೈಟಿ): ಗ್ಯಾಸೋಲಿನ್ ಸಾಗಿಸುತ್ತಿದ್ದ ಟ್ರಕ್ ಉರುಳಿಬಿದ್ದು, ಅಗ್ನಿ ಅವಘಡ ಸಂಭವಿಸಿ ಸುಮಾರು 75 ಮಂದಿ ಸಾವನ್ನಪ್ಪಿ, ಸಾಕಷ್ಟು ಮಂದಿ ಗಾಯಗೊಂಡಿರುವುದು ಮಾತ್ರವಲ್ಲದೇ ಸಾಕಷ್ಟು ಕಾರುಗಳು, ಮನೆಗಳಿಗೆ ಹಾನಿಯಾಗಿರುವ ಘಟನೆ ಉತ್ತರ ಹೈಟಿಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಟ್ರಕ್ ಉರುಳಿಬಿದ್ದ ತಕ್ಷಣ, ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸಿದ್ದು, ಅಲ್ಲಿಯೇ ಅಕ್ಕಪಕ್ಕದ ಕಾರುಗಳು ಮತ್ತು ಮನೆಗಳಿಗೂ ಬೆಂಕಿಯ ತೀವ್ರತೆ ಸಾಕಷ್ಟು ಹಾನಿಯಾಗಿದೆ. ಕೆಲವರಿಗೆ ಬೆಂಕಿಗೆ ಕಾರಣವೇನು ಎಂಬುದನ್ನು ತಿಳಿಯಲು ಕೂಡಾ ಕೆಲವರಿಗೆ ಸಾಧ್ಯವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅತಿ ಹೆಚ್ಚು ಪ್ರಮಾಣದಲ್ಲಿ ಅಗ್ನಿ ಅವಘಡ ಸಂಭವಿಸಿದ ಕಾರಣದಿಂದಾಗಿ ಸ್ಥಳೀಯ ಆಸ್ಪತ್ರೆಯು ಗಾಯಾಳುಗಳಿಂದ ತುಂಬಿ ತುಳುಕುತ್ತಿತ್ತು ಎಂದು ತಿಳಿದುಬಂದಿದೆ. ಹೈಟಿಯಲ್ಲಿರುವ ಗ್ಯಾಸ್ ಸ್ಟೇಷನ್, ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಹೈಟಿ ಪ್ರಧಾನಮಂತ್ರಿ ಏರಿಯಲ್ ಹೆನ್ರಿ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಯೋಗಕ್ಷೇಮ ವಿಚಾರಣೆ ನಡೆಸಿದ್ದಾರೆ. ದುರಂತದ ಕುರಿತು ಪ್ರತಿಕ್ರಿಯೆ ನೀಡಿದ ಅವರು ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ವರದಿಯ ಪ್ರಕಾರ ಎದುರು ಬರುತ್ತಿದ್ದ ಬೈಕ್ ಅನ್ನು ತಪ್ಪಿಸುವ ಯತ್ನದಲ್ಲಿ ಟ್ರಕ್ ಉರುಳಿದೆ ಎಂದು ತಿಳಿದುಬಂದಿದ್ದು, ತನಿಖೆ ಪ್ರಗತಿಯಲ್ಲಿದೆ. ಇದರೊಂದಿಗೆ 50 ಮನೆಗಳು ಬೆಂಕಿಗೆ ಆಹುತಿಯಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:Pulwama Encounter: ಹಿಜ್ಬುಲ್ ಉಗ್ರನ ಹೊಡೆದುರುಳಿಸಿದ ಭದ್ರತಾ ಪಡೆ