ಮಿನ್ನಿಯಾಪೋಲಿಸ್ (ಯು.ಎಸ್): ಪೊಲೀಸರ ಹಿಂಸೆಯಿಂದ ಸಾವನ್ನಪ್ಪಿದ್ದ ಕಪ್ಪು ವರ್ಣೀಯನನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಮಿನ್ನಿಯಾ ನಗರದ ನಾಲ್ವರು ಪೋಲಿಸ್ ಅಧಿಕಾರಿಗಳನ್ನು ವಜಾ ಮಾಡಲಾಗಿದೆ.
ಪೊಲೀಸ್ ಅಧಿಕಾರಿಯೊಬ್ಬ ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯ ಕುತ್ತಿಗೆಯ ಮೇಲೆ ತನ್ನ ಮೊಣಕಾಲುಗಳನ್ನಿರಿಸಿ ಆ ವ್ಯಕ್ತಿಯನ್ನು ಹಿಂಸಿಸಿದ್ದ. ಫ್ಲಾಯ್ಡ್ ತನಗೆ ಉಸಿರಾಡಲು ಕಷ್ಟವಾಗುತ್ತಿದೆ ಎಂದು ಅತ್ತರೂ ಪೊಲೀಸ್ ಅಧಿಕಾರಿ ಅದನ್ನು ನಿರ್ಲಕ್ಷಿಸಿದ್ದಾನೆ. ವಿಪರೀತ ಹಿಂಸೆಯಿಂದ ಆತ ಸಾವಿಗೀಡಾಗಿದ್ದ.
ಈ ಫೋಟೊಗಳು ವೈರಲ್ ಆಗುತ್ತಿದ್ದಂತೆಯೇ ಮೇಯರ್ ಜಾಕೋಬ್ ಫ್ರೇ ಅವರು ಟ್ವಿಟ್ಟರ್ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ. ಕಪ್ಪು ವ್ಯಕ್ತಿಗಳ ಮೇಲೆ ಈ ರೀತಿಯ ದೌರ್ಜನ್ಯ ಖಂಡನೀಯ ಎಂದು ಹೇಳಿದ್ದಾರೆ.
ಅಂಗಡಿಯೊಂದಕ್ಕೆ ಮೋಸ ಮಾಡಿರುವ ಪ್ರಕರಣದಲ್ಲಿ ಫ್ಲಾಯ್ಡ್ ಶಂಕಿತನೆಂದು ಪೊಲಿಸರು ಆತನನ್ನು ಬಂಧಿಸಲು ಹೋದಾಗ, ಆತ ವಿರೋಧಿಸಿದ್ದಾನೆ. ಹೀಗಾಗಿ ಪೊಲೀಸರು ಆತನೊಂದಿಗೆ ಈ ರೀತಿಯಾಗಿ ವರ್ತಿಸಿದ್ದಾರೆ.
ಪೊಲೀಸರ ಈ ನಡೆ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆ ಪೊಲೀಸರನ್ನು ವಜಾಗೊಳಿಸಲಾಗಿದೆ.